ಕರ್ತವ್ಯ ನಿರತ ಮಹಿಳಾ ಪಿ ಎಸ್ ಐ ಮತ್ತು ಚಾಲಕನ ಮೇಲೆ ದಮ್ಕಿ ಹಾಕಿ ಹಲ್ಲೆ ಮಾಡಿ ಪ್ರಾಣ ಬೆದರಿಕೆ

ಚಿಕ್ಕಬಳ್ಳಾಪುರ :ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರದ ಬಳಿಯ ಜಮ್ಮ ಜಮ್ಮ ಹೋಟಲ್ ನ ಮುಂದಿದ್ದ ಯುವಕರ ಗುಂಪು ಪೊಲೀಸರ್ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿರುವ ದೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಸ್ಪೆಕ್ಟರ್ ನಾಗಮ್ಮ ಫಕೀರಪ್ಪಗೋಳ್ ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಎಸ್ಪಿ ಸಾಹೇಬರ ಆದೇಶದಂತೆ ಉಪವಿಭಾಗದ ಚಿಂತಾಮಣಿ ವೃತ್ತದಲ್ಲಿ ರಾತ್ರಿ ಗಸ್ತು ಕರ್ತವ್ಯಕ್ಕೆ ಜೀಪಿನಲ್ಲಿ ತೆರಳಿದ್ದೆ. ನಗರ, ಬೂರಗಮಾಕಲಹಳ್ಳಿ, ಮಾಡಿಕೆರೆ ಕ್ರಾಸ್, ಕುರುಟಹಳ್ಳಿ ಕ್ರಾಸ್ ಗಸ್ತು ಮುಗಿಸಿಕೊಂಡು ಚಿನ್ನಸಂದ್ರ ಗ್ರಾಮದ ಬಳಿ ಬಂದಾಗ ರಾತ್ರಿ ಸುಮರು 12.40 ಗಂಟೆಯಾಗಿತ್ತು. ಚಿನ್ನಸಂದ್ರ ಗ್ರಾಮದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿಯ ಜಮ್ ಜಮ್ ಹೋಟೆಲ್ ತೆರೆದಿತ್ತು ಎಂದು ತಿಳಿಸಿದ್ದಾರೆ.
ಜೀಪ್ ಚಾಲಕ ವೇಣುಗೋಪಾಲ್ ಜೀಪಿನಿಂದ ಇಳಿದು ಹೋಟೆಲ್ ಬಳಿ ತೆರಳಿ ಯಾಕೆ ಇನ್ನೂ ಹೋಟೆಲ್ ತೆರೆದಿದ್ದೀರಿ, ಕೂಡಲೇ ಬಂದ್ ಮಾಡು ಎಂದು ಹೋಟೆಲ್ ಮಾಲೀಕ ಶಾಹಿದ್ ಖಾನ್ ಗೆ ಸೂಚಿಸಿದ. ಮಾಲೀಕ ಹೋಟೆಲ್ ಬಾಗಿಲು ಮುಚ್ಚುತ್ತಿರುವಾಗ ಕೆಲವು ಯುವಕರ ಗುಂಪು ಯಾಕೆ ಮುಚ್ಚಬೇಕು ಎಂದು ವೇಣುಗೋಪಾಲ್ ರೊಂದಿಗೆ ಮಾತಿನ ಚಕಮುಖಿಗೆ ಇಳಿದಿದ್ದಾರೆ.
ನಾನು ಜೀಪ್ ಇಳಿದು ಅಲ್ಲಿ ನಡೆಯುತ್ತಿದ್ದ ದೃಶ್ಯವನ್ನು ಮೊಬೈಲ್ ಮೂಲಕ ವೀಡಿಯೋ ಮಾಡುತ್ತಿದ್ದೆ. ನಾಗೇಂದ್ರ ಎಂಬ ಯುವಕ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಯಾಕೆ ವೀಡಿಯೋ ಮಾಡುತ್ತಿಯಾ ಎಂದು ಎದೆಯ ಭಾಗದಿಂದ ಹಿಂದಕ್ಕೆ ನೂಕಿರುತ್ತಾನೆ. ಅವನ ಜತೆಯಲ್ಲಿ ಇತರೆ ಐವರು ಅಸಾಮಿಗಳು ಏಕಾಏಕಿ ವೇಣುಗೋಪಾಲ್ ಮೇಲೆ ಕೈಗಳಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗ್ರಾಮದ ನಿವಾಸಿಗಳಾದ ಸುಲ್ತಾನ್, ಶಾಹೀದ್ ಖಾನ್, ತೌಷಿಫ್ ಖಾನ್ ಮತ್ತಿತರರು ಅಡ್ಡಬಂದು ಬುದ್ದಿವಾದ ಹೇಳಿದರೂ ಕೇಳದೆ 6 ಜನರ ಗುಂಪು ನನ್ನ ಮೇಲೆ ಹಾಗೂ ವೇಣುಗೋಪಾಲ್ ಮೇಲೆ ಹಲ್ಲೆ ಮಾಡಿದರು. ಆಲಂಬಗಿರಿ ಗ್ರಾಮದ ನಾಗೇಂದ್ರ, ನವೀನ್, ನರೇಂದ್ರ ಯಾದವ್, ಬೆಂಗಳೂರಿನ ಯಲಹಂಕದ ಪುನೀತ್ ಹಾಗೂ ಮತ್ತಿಬ್ಬರು ಗುಂಪಿನಲ್ಲಿದ್ದರು. ಮಹಿಳಾ ಸಬ್ ಇನ್ಸ್ ಸ್ಪೆಕ್ಟರ್ ಎಂದು ಗೊತ್ತಿದ್ದರೂ, ಮಹಿಳೆಯಾದ ನನ್ನ ಕೈಯಿಂದ ಮೊಬೈಲ್ ಕಸಿದುಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಕೈಗಳಿಂದ ತಳ್ಳಿ, ಹಲ್ಲೆ ಮಾಡಿರುವ ಆರೋಪಿಗಳ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಎಂದು ಕೋರಿದ್ದಾರೆ.
ವರದಿ:ಕೆ.ಮುತ್ತಕದಹಳ್ಳಿ ವೆಂಕಟಾಚಲಪತಿ ಪೊಲೀಸ್ ವಾರ್ತೆ ಚಿಕ್ಕಬಳ್ಳಾಪುರ



