ರಾಜ್ಯ ಸುದ್ದಿಜಿಲ್ಲಾ ಸುದ್ದಿತಾಲೂಕುಸ್ಥಳೀಯ ಸುದ್ದಿಗಳು

ಅಂಕೋಲಾದಲ್ಲಿ ಆಟೋ ಗ್ಯಾಸ್ ದರ ಸಮರ: ಯುದ್ಧದ ನೆಪ ಹೇಳಿ ನಡೆಯುತ್ತಿದೆಯೇ ಆಟೋ ರಿಕ್ಷಾದವರ ಜೇಬಿಗೆ ಕತ್ತರಿ?* 

Share News

*ಅಂಕೋಲಾ*: ತಾಲೂಕಿನ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರ ಪಾಲಿಗೆ ಕಳೆದ ಕೆಲವು ದಿನಗಳು ಅಕ್ಷರಶಃ ನುಂಗಲಾರದ ತುತ್ತಾಗಿ ಪರಿಣಮಿಸಿವೆ. ದಿನನಿತ್ಯದ ದುಡಿಮೆಯನ್ನು ನಂಬಿ ಬದುಕುವ ನೂರಾರು ಚಾಲಕರು, ಪ್ರತಿ ಲೀಟರ್ ಗ್ಯಾಸ್‌ಗೆ ಪಾವತಿಸಬೇಕಾದ ಬೆಲೆ ಇಂದು ಅವರ ಬದುಕಿನ ಬಂಡಿಯನ್ನೇ ಅಸ್ಥಿರಗೊಳಿಸಿದೆ. ಈ ಸಂಕಷ್ಟದ ಆರಂಭವಾಗಿದ್ದು ಮಾರ್ಚ್ ತಿಂಗಳಿನಿಂದ ಅಂಕೋಲಾದ ಬಾಳೆಗುಳಿಯಲ್ಲಿರುವ ಎಲ್‌ಪಿಜಿ ಆಟೋ ಗ್ಯಾಸ್ ಕೇಂದ್ರ ಮತ್ತು ಅಲ್ಲಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಮೀಪ ಬೊಳೆ ಹೊಸಗದ್ದೆ ಯ ಗೋ ಗ್ಯಾಸ್ (Go Gas) ಕೇಂದ್ರದ ನಡುವೆ ಕಂಡುಬರುತ್ತಿರುವ ದರ ವ್ಯತ್ಯಾಸವು, ಈಗ ಸ್ಥಳೀಯ ಆಟೋ ರಿಕ್ಷಾ ಚಾಲಕ-ಮಾಲಕರ ಯೂನಿಯನ್ ಉಪಾಧ್ಯಕ್ಷರಾದ ಗಂಗಾಧರ್ ಗಾಂವಕರ್ ಕೇಣಿ ಅವರ ಗಮನಕ್ಕೆ ಬಂದಿದೆ.

ಅವರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಸರ್ಕಾರಿ ನಿಯಂತ್ರಿತ ಎಲ್‌ಪಿಜಿ ದರ ₹65.90 ಇದ್ದರೆ, ಗೋ ಗ್ಯಾಸ್ ಕೇಂದ್ರದಲ್ಲಿ ಮಾತ್ರ ಗ್ರಾಹಕರಿಂದ ಲೀಟರ್‌ಗೆ ₹71ರಂತೆ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಮಾರ್ಚ್ ಆರಂಭದಲ್ಲಿ ಎಲ್‌ಪಿಜಿ ದರ ₹60.95 ರಿಂದ ₹65.90ಕ್ಕೆ ಏರಿಕೆಯಾದಾಗ, ಗೋ ಗ್ಯಾಸ್‌ನಲ್ಲಿ ಕೂಡ ದರ ₹61.05 ರಿಂದ ₹65.95ರ ಹಂತ ದಾಟಿ, ಇದೀಗ ನೇರವಾಗಿ ₹71ರ ಗಡಿ ತಲುಪಿರುವುದು ಸಾಮಾನ್ಯ ವಿಷಯವಲ್ಲ, ಇದೊಂದು ದೊಡ್ಡ ಆರ್ಥಿಕ ಹೊರೆ ಎಂದು ಚಾಲಕರು ದೂರುತ್ತಿದ್ದಾರೆ.

ಈ ಅಸಮಾನ ದರ ಏರಿಕೆಯ ಬಗ್ಗೆ ಪ್ರಶ್ನಿಸಲು ಗಂಗಾಧರ್ ಗಾಂವಕರ್ ಅವರು ತಮ್ಮ ತಂಡದೊಂದಿಗೆ ಗೋ ಗ್ಯಾಸ್ ಕೇಂದ್ರಕ್ಕೆ ತೆರಳಿದಾಗ, ಅಲ್ಲಿನ ಸಿಬ್ಬಂದಿಯ ಹಾರಿಕೆಯ ಉತ್ತರಗಳು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದವು. ಕೇಂದ್ರದ ಮುಂಭಾಗದಲ್ಲಿ “ಪ್ರಸ್ತುತ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿದೆ, ದರಗಳನ್ನು ಪರಿಷ್ಕರಿಸಲಾಗಿದೆ ಮತ್ತು ಆಫರ್‌ಗಳನ್ನು ಸ್ಥಗಿತಗೊಳಿಸಲಾಗಿದೆ” ಎಂಬ ಬ್ಯಾನರ್ ತೂಗಿ ಹಾಕಲಾಗಿದೆ. ಆದರೆ, ಈ ‘ಯುದ್ಧದ ನೆಪ’ ಕೇವಲ ಗೋ ಗ್ಯಾಸ್‌ಗೆ ಮಾತ್ರ ಅನ್ವಯಿಸುತ್ತಿದೆಯೇ? ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಎಲ್‌ಪಿಜಿ ಕೇಂದ್ರದಲ್ಲಿ ಅದೇ ಇಂಧನ ₹65.90ಕ್ಕೆ ಸಿಗುತ್ತಿರುವಾಗ, ಗೋ ಗ್ಯಾಸ್‌ನಲ್ಲಿ ಮಾತ್ರ ₹5ಕ್ಕೂ ಹೆಚ್ಚು ದುಬಾರಿ ಏಕೆ? ಎಂದು ಗಂಗಾಧರ್ ಅವರು ಕೇಳಿದಾಗ, ಸಿಬ್ಬಂದಿ ಬಳಿ ಕಂಪನಿಯ ಯಾವುದೇ ಅಧಿಕೃತ ದರ ಪಟ್ಟಿ ಅಥವಾ ಆದೇಶದ ಪ್ರತಿ ಇರಲಿಲ್ಲ. “ನಾವು ಕಂಪನಿಯ ಮಾರ್ಗಸೂಚಿಯಂತೆ ಕೆಲಸ ಮಾಡುತ್ತಿದ್ದೇವೆ” ಎಂಬ ಸಬೂಬು ನೀಡಿದ ಸಿಬ್ಬಂದಿ, ಗ್ರಾಹಕರ ಹಿತಾಸಕ್ತಿಯನ್ನು ಕಡೆಗಣಿಸಿ, ಯುದ್ಧದ ಸನ್ನಿವೇಶವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಈ ಅಕ್ರಮ ದರ ಏರಿಕೆಯ ವಿರುದ್ಧ ಸಿಡಿದೆದ್ದಿರುವ ಆಟೋ ರಿಕ್ಷಾ ಯೂನಿಯನ್, ಜಿಲ್ಲಾ ಉಪಾಧ್ಯಕ್ಷ ಮಹೇಶ್ ನಾಯ್ಕ ಮತ್ತು ಅಮರ್ ನಾಯ್ಕ ಅವರ ನೇತೃತ್ವದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ..

ಗಂಗಾಧರ್ ಗಾಂವಕರ್ ಅವರು ಮಾತನಾಡಿ, “ನಾವು ಬಡವರು, ದುಡಿದು ತಿನ್ನುವ ಜನ. ನಮ್ಮ ಬದುಕಿನ ಮೇಲೆ ಇಂತಹ ಬೆಲೆ ಏರಿಕೆಯ ಬರೆ ಎಳೆಯುವುದು ಯಾವ ನ್ಯಾಯ? ಸಂಬಂಧವೇ ಇಲ್ಲದ ಯುದ್ಧದ ನೆಪ ಹೇಳಿ ನಮ್ಮ ಜೇಬಿಗೆ ಕೈ ಹಾಕುತ್ತಿರುವುದು ಶೋಷಣೆಯಲ್ಲದೆ ಮತ್ತೇನಲ್ಲ” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಎರಡು ಗ್ಯಾಸ್ ಕಂಪನಿಗಳ ನಡುವಿನ ಈ ಭಾರಿ ವ್ಯತ್ಯಾಸವು ಬಡ ಚಾಲಕರ ಆದಾಯವನ್ನು ಕುಂಠಿತಗೊಳಿಸುತ್ತಿದ್ದು, ಕುಟುಂಬ ನಿರ್ವಹಣೆಯೂ ಕಷ್ಟಸಾಧ್ಯವಾಗಿದೆ. ಯಾವುದೇ ಸೂಕ್ತ ಆದೇಶ ಅಥವಾ ಪಾರದರ್ಶಕತೆ ಇಲ್ಲದೆ ಕಂಪನಿಯೊಂದು ಮನಬಂದಂತೆ ಬೆಲೆ ನಿಗದಿ ಮಾಡುತ್ತಿರುವುದು ಕಾನೂನುಬಾಹಿರ ಎಂದು ಯೂನಿಯನ್ ಪ್ರತಿಪಾದಿಸುತ್ತಿದೆ.

ಈಗ ಅಂಕೋಲಾದ ಚಾಲಕ-ಮಾಲಕರು ನ್ಯಾಯಕ್ಕಾಗಿ ತಹಶೀಲ್ದಾರರು ಮತ್ತು ಜಿಲ್ಲಾಡಳಿತದ ಕದ ತಟ್ಟಲು ನಿರ್ಧರಿಸಿದ್ದಾರೆ. ಸೂಕ್ತ ಆದೇಶವಿಲ್ಲದೆ ಏಕಪಕ್ಷೀಯವಾಗಿ ಇಂಧನ ಬೆಲೆ ಏರಿಕೆ ಮಾಡುತ್ತಿರುವ ಗೋ ಗ್ಯಾಸ್ ಕಂಪನಿಯ ವಿರುದ್ಧ ತನಿಖೆ ನಡೆಸಬೇಕು, ಸ್ಥಳೀಯ ಆಟೋ ಚಾಲಕರಿಗೆ ನ್ಯಾಯ ದೊರಕಿಸಿಕೊಡಬೇಕು ಮತ್ತು ಇಂಧನ ದರದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಯೂನಿಯನ್ ಆಗ್ರಹಿಸಿದೆ. ಕೇವಲ ಲಾಭಕ್ಕಾಗಿ ಬಡವರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಖಾಸಗಿ ಸಂಸ್ಥೆಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕುವುದೇ? ಅಥವಾ ಚಾಲಕರು ಅಸಹಾಯಕರಾಗಿ ಈ ದರ ದರೋಡೆಯನ್ನು ಸಹಿಸಿಕೊಳ್ಳಬೇಕೇ? ಎಂಬುದು ಈಗ ಅಂಕೋಲಾದ ಪ್ರಮುಖ ಪ್ರಶ್ನೆಯಾಗಿದೆ. ನ್ಯಾಯದ ನಿರೀಕ್ಷೆಯಲ್ಲಿರುವ ನೂರಾರು ಚಾಲಕರ ಕೂಗು ಜಿಲ್ಲಾಡಳಿತದ ಕಿವಿ ಮುಟ್ಟುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!