ಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿ

ಮಳವಳ್ಳಿ: ಕೆರೆಯಲ್ಲಿ ಈಜಲು ಹೋಗಿ ಐದನೇ ತರಗತಿ ವಿದ್ಯಾರ್ಥಿ ಸಾವು; ಮತ್ತೊಬ್ಬನ ರಕ್ಷಣೆ

Share News

ಮಳವಳ್ಳಿ: ಪರೀಕ್ಷೆ ಮುಗಿಸಿ ಗೆಳೆಯರೊಂದಿಗೆ ಕೆರೆಗೆ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗುತ್ತಿದ್ದಾಗ ಓರ್ವ ಮೃತಪಟ್ಟು, ಮತ್ತೊಬ್ಬನನ್ನು ಪ್ರಾಣಾಪಾಯದಿಂದ ರಕ್ಷಿಸಿರುವ ಘಟನೆ ಮಳವಳ್ಳಿ ಪಟ್ಟಣದ ದೊಡ್ಡಕೆರೆಯಲ್ಲಿ ನಡೆದಿದೆ.

ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಬಸಂತ್ ಕುಮಾರ್ (11) ಮೃತ ದುರ್ದೈವಿ. ಇದೇ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಹೇಮಂತ್ (12) ಎಂಬಾತನನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಶಾಲೆಯಲ್ಲಿ ಪರೀಕ್ಷೆ ಮುಗಿಸಿದ ನಂತರ ವಿದ್ಯಾರ್ಥಿಗಳ ಗುಂಪೊಂದು ಪಟ್ಟಣದ ದೊಡ್ಡಕೆರೆಗೆ ಈಜಲು ತೆರಳಿತ್ತು. ಈ ವೇಳೆ ನೀರಿನ ಆಳ ತಿಳಿಯದೆ ಬಸಂತ್ ಕುಮಾರ್ ಮತ್ತು ಹೇಮಂತ್ ಇಬ್ಬರೂ ಮುಳುಗಲಾರಂಭಿಸಿದರು. ಕೂಡಲೇ ಅಲ್ಲಿದ್ದವರು ಗಮನಿಸಿ ಹೇಮಂತ್‌ನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ, ಬಸಂತ್ ಕುಮಾರ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ರಕ್ಷಿಸಲ್ಪಟ್ಟ ವಿದ್ಯಾರ್ಥಿ ಹೇಮಂತ್‌ನನ್ನು ತಕ್ಷಣವೇ ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆತ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಮಳವಳ್ಳಿ ಟೌನ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪರೀಕ್ಷೆ ಬರೆದು ಖುಷಿಯಿಂದ ಮನೆಗೆ ಮರಳಬೇಕಿದ್ದ ಬಾಲಕ ವಿಧಿವಶನಾಗಿರುವುದು ಪಟ್ಟಣದಲ್ಲಿ ವಿಷಾದ ಮೂಡಿಸಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!