ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಮಂಗಳೂರು ಪೀಠಕ್ಕೆ ಉತ್ತರ ಕನ್ನಡ ಸೇರ್ಪಡೆ ವಿರೋಧಿಸಿ ಆ.13ರಂದು ಕಾರವಾರದಲ್ಲಿ ಬೃಹತ್ ಪಾದಯಾತ್ರೆ: ವಕೀಲರ ಸಂಘದ ಅಧ್ಯಕ್ಷ ನಾಗರಾಜ ನಾಯಕ

Share News

ಕಾರವಾರ: ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತಾಪಿತ ಮಂಗಳೂರು ಹೈಕೋರ್ಟ್ ಪೀಠದ ವ್ಯಾಪ್ತಿಗೆ ಸೇರಿಸುವುದನ್ನು ತೀವ್ರವಾಗಿ ವಿರೋಧಿಸಿ, ಜಿಲ್ಲೆಯನ್ನು ಹಾಲಿ ಇರುವ ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯಲ್ಲೇ ಮುಂದುವರಿಸಬೇಕು ಎಂದು ಆಗ್ರಹಿಸಿ ಆಗಸ್ಟ್ 13ರಂದು ಕಾರವಾರದಲ್ಲಿ ಬೃಹತ್ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ನಾಯಕ ತಿಳಿಸಿದ್ದಾರೆ.

​ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ನಗರದ ಮಿತ್ರಸಮಾಜದಿಂದ ಪ್ರಾರಂಭವಾಗುವ ಪಾದಯಾತ್ರೆಯು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಿದೆ. ಈ ಪಾದಯಾತ್ರೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ವಕೀಲರು, ಧಾರವಾಡ ಪೀಠ ವ್ಯಾಪ್ತಿಯ ಎಂಟು ಜಿಲ್ಲೆಗಳ ವಕೀಲರ ಸಂಘಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

​ಕಕ್ಷಿದಾರರಿಗೆ ತೀವ್ರ ಸಂಕಷ್ಟ – ‘ಮನೆ ಬಾಗಿಲಿಗೆ ನ್ಯಾಯ’ಕ್ಕೆ ಧಕ್ಕೆ:

ಜಿಲ್ಲೆಯನ್ನು ಮಂಗಳೂರು ಪೀಠಕ್ಕೆ ಸೇರಿಸುವುದರಿಂದ ಸಾರ್ವಜನಿಕರಿಗೆ ಹಾಗೂ ಕಕ್ಷಿದಾರರಿಗೆ ಪ್ರಯಾಣದ ದೂರ, ಸಮಯ ಮತ್ತು ಆರ್ಥಿಕ ಹೊರೆ ಹೆಚ್ಚಾಗಲಿದೆ. ಇದು ಸರ್ಕಾರದ ‘ಮನೆ ಬಾಗಿಲಿಗೆ ನ್ಯಾಯ’ ಒದಗಿಸುವ ಮೂಲ ಉದ್ದೇಶಕ್ಕೆ ಭಂಗ ತರಲಿದೆ. ಜೊತೆಗೆ ಆಡಳಿತಾತ್ಮಕ ಹಾಗೂ ಭಾಷಾ ವೈವಿಧ್ಯತೆಯ ಸಮಸ್ಯೆಗಳೂ ಎದುರಾಗಬಹುದು. ಈ ಸಂಬಂಧ ಈಗಾಗಲೇ ರಾಜ್ಯದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ಸರ್ಕಾರಕ್ಕೆ ವಿವರವಾದ ಮನವಿ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು.

​ಕರಾವಳಿ ಪೀಠಕ್ಕೆ ಹೊನ್ನಾವರ ಸೂಕ್ತ ಸ್ಥಳ:

ಕರಾವಳಿ ಭಾಗಕ್ಕೆ ಪ್ರತ್ಯೇಕ ಹೈಕೋರ್ಟ್ ಪೀಠದ ಅಗತ್ಯವಿದ್ದರೆ, 10,227 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯೇ ಅತ್ಯಂತ ಸೂಕ್ತ. ಐತಿಹಾಸಿಕವಾಗಿ 1857ರಲ್ಲಿ ಕೆನರಾ ಜಿಲ್ಲೆ ವಿಭಜನೆಯಾದಾಗ ಹೊನ್ನಾವರವೇ ಜಿಲ್ಲಾ ಕೇಂದ್ರವಾಗಿದ್ದರಿಂದ ಕರಾವಳಿ ಪೀಠ ಸ್ಥಾಪನೆಗೆ ಹೊನ್ನಾವರವೇ ಸೂಕ್ತ ಸ್ಥಳ ಎಂದು ನಾಗರಾಜ ನಾಯಕ ಸಲಹೆ ನೀಡಿದರು.

​ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ನಾಗರಾಜ ದೇಶಭಂಡಾರಿ, ಪದ್ಮಾ ತಾಂಡೇಲ್ ದೀಪಾ, ಸಂಜಯ ಸಾಳುಂಕೆ, ಚರಣ್ ನಾಯ್ಕ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!