ಪ್ರಿಯಕರನ ಸುಖಕ್ಕಾಗಿ ಅಮಾಯಕ ಗಂಡನನ್ನೇ ಮುಗಿಸಿದ ಜಯಲಕ್ಷ್ಮಿ!

ಗಂಡ-ಹೆಂಡತಿ ಸಂಬಂಧ ಅಂದರೆ ಬರೀ ಮೂರು ಗಂಟಿನ ಕತೆಯಲ್ಲ; ಕಷ್ಟ-ಸುಖದಲ್ಲಿ ಬೆನ್ನೆಲುಬಾಗಿ ನಿಲ್ಲುವ ಪವಿತ್ರ ಬಂಧ. ಮನೆಯ ಜವಾಬ್ದಾರಿ, ಸಂಸಾರದ ರಕ್ಷಣೆ ಹೊತ್ತು ಪತ್ನಿಯ ಪ್ರತಿಯೊಂದು ಹೆಜ್ಜೆಯಲ್ಲೂ ನೆರಳಾಗುವ ಮನೆ ಯಜಮಾನ ಗಂಡ. ಆದರೆ ಇತ್ತೀಚಿನ ದಿನಗಳಲ್ಲಿ ಸಪ್ತಪದಿ ತುಳಿದು ಬಂದವರೇ, ಕಾಮದ ಕಣ್ಣಿಗೆ ಬಿದ್ದು ಆ ಪವಿತ್ರ ಸಂಬಂಧಕ್ಕೆ ಕೊಳ್ಳಿ ಇಡುತ್ತಿದ್ದಾರೆ. ಪರಪುರುಷನ ಮೋಹಕ್ಕೆ ಬಿದ್ದು, ತಾಳಿ ಕಟ್ಟಿದವನನ್ನೇ ಕೊಂದು ಗೋರಿ ಕಟ್ಟುವ ಕ್ರೂರ ಮನಸ್ಥಿತಿಗಳು ಸಮಾಜದಲ್ಲಿ ಹೆಚ್ಚಾಗುತ್ತಿವೆ. ಹಾಸನದಲ್ಲಿ ನಡೆದ ಈ ಬೆಚ್ಚಿಬೀಳಿಸುವ ಘಟನೆಯೇ ಇದಕ್ಕೆ ತಾಜಾ ಸಾಕ್ಷಿ.
ಏನಿದು ಘಟನೆ?
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಸವನಹಟ್ಟಿಯ ನಿವಾಸಿ ಮೋಹನ್ ಎಂಬ ಕಷ್ಟಪಟ್ಟು ದುಡಿಯುವ ಅಮಾಯಕ ರೈತನಿಗೆ ಇದೇ ಊರಿನ ಜಯಲಕ್ಷ್ಮಿ ಜೊತೆ ವಿವಾಹವಾಗಿತ್ತು. ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು. ಆದರೆ ನೋಡಲು ಮುಗ್ಧೆಯಂತೆ ಕಾಣುತ್ತಿದ್ದ ಜಯಲಕ್ಷ್ಮಿ, ಅದೇ ಊರಿನ ಧನಂಜಯ ಎಂಬಾತನ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳು. ಗಂಡ ಮನೆಯಲ್ಲಿ ಇಲ್ಲದ ಸಮಯದಲ್ಲೆಲ್ಲಾ ಇವರ ಕಳ್ಳಾಟ ಜೋರಾಗಿಯೇ ಸಾಗುತ್ತಿತ್ತು.
ಶುಂಠಿ ಬೆಳೆ ಮೇಲೆ ಕಣ್ಣು, ಗಂಡನಿಗೆ ಸುಪಾರಿ ಸ್ಕೆಚ್:
ಕಾಮದ ಅಮಲು ನೆತ್ತಿಗೇರಿದಂತೆ, ಇವರಿಬ್ಬರ ಅಕ್ರಮ ಸಂಬಂಧಕ್ಕೆ ಮೋಹನ್ ಅಡ್ಡ ಬರುತ್ತಾನೆ ಎಂಬ ಭಯ ಶುರುವಾಯಿತು. ಅಷ್ಟೇ ಅಲ್ಲ, ಮೋಹನ್ ತನ್ನ ಜಮೀನಿನಲ್ಲಿ ಅತ್ಯುತ್ತಮವಾಗಿ ಶುಂಠಿ ಬೆಳೆದಿದ್ದ. “ಗಂಡನನ್ನು ಮುಗಿಸಿಬಿಟ್ಟರೆ ಆ ಶುಂಠಿ ಬೆಳೆ ಮಾರಿ ಲಕ್ಷಾಂತರ ರೂಪಾಯಿ ಬಾಚಿಕೊಳ್ಳಬಹುದು, ಆಮೇಲೆ ಇಬ್ಬರೂ ಸೇರಿ ರಾಜಾರೋಷವಾಗಿ ಬದುಕಬಹುದು” ಎಂದು ಈ ಜೋಡಿ ಲೆಕ್ಕಾಚಾರ ಹಾಕಿತ್ತು. ಇದಕ್ಕಾಗಿ ತಮ್ಮದೇ ಊರಿನ ಪುಟ್ಟರಾಜ ಮತ್ತು ಜಗದೀಶ ಎಂಬಿಬ್ಬರಿಗೆ ಮೋಹನ್‌ನನ್ನು ಮುಗಿಸಲು ₹1 ಲಕ್ಷ ಸುಪಾರಿ ಫಿಕ್ಸ್ ಮಾಡಲಾಗಿತ್ತು.
ಮಧ್ಯರಾತ್ರಿ ಹೊಲದಲ್ಲೇ ಕೊಚ್ಚಿ ಕೊಲೆ:
ಸೆಪ್ಟೆಂಬರ್ 4ರ ಮಧ್ಯರಾತ್ರಿ, ಜಮೀನಿನಲ್ಲಿ ಬೆಳೆದಿದ್ದ ಶುಂಠಿಗೆ ನೀರು ಹಾಯಿಸಲು ಮೋಹನ್ ಹೊಲಕ್ಕೆ ತೆರಳಿದ್ದ. ಕರೆಂಟ್ ಇಲ್ಲದ ಕಾರಣ ಹೊಲದಲ್ಲೇ ಕುಳಿತು ಕಾದು ನೋಡುತ್ತಿದ್ದ. ಇದನ್ನೇ ಹೊಂಚು ಹಾಕುತ್ತಿದ್ದ ಸುಪಾರಿ ಹಂತಕರು, ಕತ್ತಲಲ್ಲಿ ಹಿಂದಿನಿಂದ ಬಂದು ಮೋಹನ್ ಮೇಲೆ ಮಚ್ಚುಗಳಿಂದ ಮನಬಂದಂತೆ ದಾಳಿ ನಡೆಸಿ, ರಕ್ತದ ಮಡುವಿನಲ್ಲಿ ಕೊಂದು ಪರಾರಿಯಾಗಿದ್ದರು.
ಪೊಲೀಸ್ ಬಲೆಗೆ ಬಿದ್ದ ಕಿಲಾಡಿ ಜೋಡಿ:
ಕೊಲೆ ಮಾಡಿ ಯಾರಿಗೂ ಅನುಮಾನ ಬಾರದಂತೆ ಓಡಾಡಿಕೊಂಡಿದ್ದ ಈ ಹಂತಕರಿಗೆ ಪೊಲೀಸರ ತನಿಖಾ ಕೌಶಲ್ಯದ ಅರಿವಿರಲಿಲ್ಲ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೊಬೈಲ್ ಸಿಡಿಆರ್ (CDR) ಪರಿಶೀಲಿಸಿದಾಗ ಜಯಲಕ್ಷ್ಮಿಯ ನಡವಳಿಕೆ ಮೇಲೆ ಬಲವಾದ ಅನುಮಾನ ಮೂಡಿದೆ. ತಕ್ಷಣ ಆಕೆಯನ್ನು ಹಾಗೂ ಪ್ರಿಯಕರ ಧನಂಜಯನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ಅಸಲಿ ಪಾಪಪುರಾಣ ಬಯಲಾಗಿದೆ. ಸದ್ಯ ಕೊಲೆಗಡುಕ ಪತ್ನಿ, ಆಕೆಯ ಪ್ರಿಯಕರ ಹಾಗೂ ಸುಪಾರಿ ಹಂತಕರು ಜೈಲು ಕಂಬಿ ಎಣಿಸುತ್ತಿದ್ದಾರೆ.
ಕ್ಷಣಿಕ ಸುಖ ಮತ್ತು ದುರಾಶೆಗೆ ಬಿದ್ದು, ನಂಬಿ ತಾಳಿ ಕಟ್ಟಿದ ಗಂಡನನ್ನೇ ಬಲಿಕೊಟ್ಟ ಈ ಮಹಾತಾಯಿಯ ಕೃತ್ಯಕ್ಕೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.



