Crime Newsಕ್ರೈಂ ಸುದ್ದಿಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿ

ಬೀದರ್: ಅಕ್ರಮ ಗ್ಯಾಸ್ ಸಿಲಿಂಡರ್ ಜಾಲದ ಮೇಲೆ ಪೊಲೀಸರ ಮಿಂಚಿನ ದಾಳಿ; 18.55 ಲಕ್ಷ ಮೌಲ್ಯದ ಸ್ವತ್ತು ಜಪ್ತಿ, ನಾಲ್ವರ ಬಂಧನ!

Share News

ಬೀದರ್: ಜಿಲ್ಲೆಯ ಜನವಾಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿಡಲಾಗಿದ್ದ ಬೃಹತ್ ಪ್ರಮಾಣದ ಅಕ್ರಮ ಗ್ಯಾಸ್ ಸಿಲಿಂಡರ್ ಜಾಲವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 18,55,255 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ದಿನಾಂಕ 16-03-2026ರ ಸಾಯಂಕಾಲ ಜನವಾಡಾ ಗ್ರಾಮದ ನದಿಗೆ ಹೋಗುವ ದಾರಿಯಲ್ಲಿರುವ ಹೊಲವೊಂದರಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ಪ್ರದೀಪ್ ಗುಂಟಿ (IPS) ಅವರ ಮಾರ್ಗದರ್ಶನದಲ್ಲಿ ಹಾಗೂ ಸಿ.ಪಿ.ಐ ಶ್ರೀ ಜಿ.ಎಸ್ ಬಿರಾದರ ಅವರ ನೇತೃತ್ವದಲ್ಲಿ ವಿಶೇಷ ತಂಡವು ಈ ಕಾರ್ಯಾಚರಣೆ ನಡೆಸಿತು.

ಆಹಾರ ನಿರೀಕ್ಷಕ ಶ್ರೀ ಶ್ರೀನಿವಾಸ್ ಹಾಗೂ ಸಿಬ್ಬಂದಿಯೊಂದಿಗೆ ಜನವಾಡಾ ಗ್ರಾಮದ ರಾಜಕುಮಾರ ಸೇರಿಕಾರ್ ಎಂಬುವವರ ಹೊಲದ ಬಳಿ ದಾಳಿ ನಡೆಸಿದಾಗ, ಎರಡು ಗೂಡ್ಸ್ ವಾಹನಗಳಲ್ಲಿ ಅಕ್ರಮವಾಗಿ ಸಿಲಿಂಡರ್ ತುಂಬಿರುವುದು ಪತ್ತೆಯಾಯಿತು. ಸ್ಥಳದಲ್ಲಿದ್ದ ನಾಲ್ವರು ಆರೋಪಿಗಳನ್ನು ವಿಚಾರಿಸಿದಾಗ, ಸಿಲಿಂಡರ್ ವಿತರಣೆಗೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳು ಇರಲಿಲ್ಲ. ಈ ಸಿಲಿಂಡರ್‌ಗಳನ್ನು ಔರಾದ್ ತಾಲೂಕಿನ ವಡಗಾಂವ್ (ದೆ) ಮಲ್ದಾರ್ ಇಂಡೇನ್ ಗ್ಯಾಸ್ ಗ್ರಾಮೀಣ ವಿತರಣೆ ಕೇಂದ್ರದಿಂದ ಕಾಳಸಂತೆಯಲ್ಲಿ ಮಾರಾಟ ಮಾಡಲು ತಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಆರೋಪಿಗಳು ನೀಡಿದ ಮಾಹಿತಿಯಂತೆ ಮೈಸಮ್ಮ ಪೆಟ್ರೋಲ್ ಪಂಪ್ ಹತ್ತಿರದ ಅಂಗಡಿಯೊಂದರ ಮೇಲೆ ದಾಳಿ ನಡೆಸಿದಾಗ ಒಟ್ಟು 105 ಅಕ್ರಮ ಸಿಲಿಂಡರ್‌ಗಳು ಪತ್ತೆಯಾಗಿವೆ. ಜಪ್ತಿ ಮಾಡಲಾದ ಸ್ವತ್ತುಗಳ ವಿವರ ಹೀಗಿದೆ:

​105 ಸಿಲಿಂಡರ್‌ಗಳು: ಅಂದಾಜು ಮೌಲ್ಯ 2,55,255/- ರೂ.

​ಟಾಟಾ ಏಸ್ ವಾಹನ: ಅಂದಾಜು ಮೌಲ್ಯ 7,00,000/- ರೂ.

​ಅಶೋಕ್ ಲೇಲ್ಯಾಂಡ್ ವಾಹನ: ಅಂದಾಜು ಮೌಲ್ಯ 9,00,000/- ರೂ.

​ಒಟ್ಟು ಮೊತ್ತ: 18,55,255/- ರೂ.

​ಈ ಸಂಬಂಧ 04 ಜನ ಆರೋಪಿಗಳು ಹಾಗೂ 04 ಗ್ಯಾಸ್ ಏಜೆನ್ಸಿಗಳ ವಿರುದ್ಧ ಜನವಾಡಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 34/2026, ಕಲಂ 3 & ಇ.ಸಿ ಆಕ್ಟ್ ಜೊತೆಗೆ 6 & 7 ಎಲ್.ಪಿ.ಜಿ ಕಂಟ್ರೋಲ್ ಆರ್ಡರ್ 2000 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಯಶಸ್ವಿ ಕಾರ್ಯಾಚರಣೆ ನಡೆಸಿದ ಎ.ಎಸ್.ಐ ವಿಶ್ವನಾಥ ಹಾಗೂ ಸಿಬ್ಬಂದಿಗಳಾದ ವಿಜಯಕುಮಾರ, ಶಿವಕುಮಾರ, ಶಾಂತಕುಮಾರ ಮತ್ತು ಡಿ.ಎಸ್.ಬಿ ಘಟಕದ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಪ್ರದೀಪ್ ಗುಂಟಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!