ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಪಾದಾಚಾರಿಗಳ ಸುರಕ್ಷತೆಗೆ ಕಠಿಣ ಕ್ರಮ: ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆಗೆ ₹5,000 ವರೆಗೆ ದಂಡ ಹೆಚ್ಚಳಕ್ಕೆ ಮನವಿ

Share News

ಬೆಂಗಳೂರು: ನಗರದಲ್ಲಿ ಪಾದಾಚಾರಿಗಳ ಸುರಕ್ಷತೆಯನ್ನು ಖಚಿತಪಡಿಸುವ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಇಂದು ಬೆಂಗಳೂರು ನಗರ ಸಂಚಾರ (ಟ್ರಾಫಿಕ್) ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದರು.

​ಸಾರ್ವಜನಿಕರ ‘ನಡೆಯುವ ಹಕ್ಕನ್ನು’ ಗೌರವಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಸೂಚನೆಯಂತೆ ನಗರದ ಐದೂ ಪಾಲಿಕೆ ವ್ಯಾಪ್ತಿಯಲ್ಲಿ ಪಾದಾಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಯಶಸ್ವಿಯಾಗಿ ನಡೆಯುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ.

​ದಂಡದ ಪ್ರಮಾಣ ಭಾರಿ ಹೆಚ್ಚಳಕ್ಕೆ ಪ್ರಸ್ತಾವನೆ: ಬೀದಿಬದಿ ವ್ಯಾಪಾರಿಗಳಿಂದ ತೆರವುಗೊಳಿಸಲಾದ ಪಾದಾಚಾರಿ ಮಾರ್ಗಗಳಲ್ಲಿ ಬೈಕ್ ಅಥವಾ ಯಾವುದೇ ಮೋಟಾರು ವಾಹನಗಳನ್ನು ಚಲಾಯಿಸುವುದನ್ನು ತಡೆಯಲು, ಹಾಲಿ ಇರುವ ₹500 ದಂಡವನ್ನು ₹5,000ಕ್ಕೆ ಹೆಚ್ಚಿಸುವಂತೆ ಸಾರಿಗೆ ಸಚಿವರಿಗೆ ಕೋರಲಾಗಿದೆ ಎಂದು ಸಚಿವರು ತಿಳಿಸಿದರು.

​ಅಪಘಾತವೆಸಗಿದರೆ ಕಠಿಣ ಕಾನೂನು ಕ್ರಮ: ಪಾದಾಚಾರಿ ಮಾರ್ಗದಲ್ಲಿ ವಾಹನ ಸಂಚರಿಸಿ ಅಪಘಾತ ಸಂಭವಿಸಿದರೆ ಚಾಲಕರ ವಿರುದ್ಧ ಮತ್ತಷ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

​ಪಾರ್ಕಿಂಗ್ ನಿಯಮಗಳ ಜಾರಿ: ನಗರದ ಪ್ರಮುಖ ರಸ್ತೆಗಳಲ್ಲಿ ‘ಆಲ್ಟರ್ನೇಟ್ ಪಾರ್ಕಿಂಗ್’ (Alternate Parking) ಅಥವಾ ‘ಒನ್-ಸೈಡ್ ಪಾರ್ಕಿಂಗ್’ (One-Side Parking) ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಟ್ರಾಫಿಕ್ ಪೊಲೀಸರಿಗೆ ನಿರ್ದೇಶನ ನೀಡಲಾಯಿತು.

​ಸಿಗ್ನಲ್ ಹಾಗೂ ಬಸ್ ನಿಲ್ದಾಣಗಳ ನಿಯಂತ್ರಣ: ಸಿಗ್ನಲ್‌ಗಳ ಬಳಿ ಅನಗತ್ಯವಾಗಿ ವಾಹನಗಳನ್ನು ನಿಲ್ಲಿಸುವುದಕ್ಕೆ ಅವಕಾಶವಿಲ್ಲ. ಅಲ್ಲದೆ, ಸಂಚಾರ ದಟ್ಟಣೆ ತಡೆಯಲು ಟ್ರಾಫಿಕ್ ಸಿಗ್ನಲ್‌ನಿಂದ 75 ಮೀಟರ್ ಹಾಗೂ ಜಂಕ್ಷನ್‌ಗಳಿಂದ 50 ಮೀಟರ್ ವ್ಯಾಪ್ತಿಯೊಳಗೆ ಬಸ್ ನಿಲ್ದಾಣಗಳು ಇರದಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

​ಸಭೆಯ ನಂತರ ಮಾತನಾಡಿದ ಸಚಿವರು, “ಪಾದಾಚಾರಿ ಮಾರ್ಗಗಳು ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕಾಗಿ ನಿರ್ಮಾಣಗೊಂಡಿವೆ. ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರಿಂದ ಮಾತ್ರವೇ ನಗರದಲ್ಲಿ ಸುಗಮ ಸಂಚಾರ ಸಾಧ್ಯ,” ಎಂದು ಪ್ರತಿಪಾದಿಸಿದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!