ಉಡುಪಿ: ರೈಲು ನಿಲ್ದಾಣದ ಗೋಪುರದಿಂದ ಜಿಗಿಯಲು ಯತ್ನಿಸಿದ ಯುವಕ; ಆರ್ಪಿಎಫ್ ಸಿಬ್ಬಂದಿಯಿಂದ ಸಾಹಸಮಯ ರಕ್ಷಣೆ

ಉಡುಪಿ: ಜೀವನದಲ್ಲಿ ಜಿಗುಪ್ಸೆಗೊಂಡು ರೈಲು ನಿಲ್ದಾಣದ ಗೋಪುರ ಏರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ಇಂದ್ರಾಳಿ ರೈಲು ನಿಲ್ದಾಣದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ದಿನಜಪುರ ಮೂಲದ ಸುಬರತ್ ಮರ್ಮು (28) ಎಂಬ ಯುವಕ ಇಂದು ಇಂದ್ರಾಳಿ ರೈಲು ನಿಲ್ದಾಣದ ಪ್ರವೇಶದ್ವಾರದ ಮೇಲ್ಭಾಗದ ಗೋಪುರ ಏರಿ ಅಲ್ಲಿಂದ ಜಿಗಿಯಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ನಿಲ್ದಾಣದ ಸಿಬ್ಬಂದಿ ಹಾಗೂ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಆರ್ಪಿಎಫ್ ಸಿಬ್ಬಂದಿ ಜೀನಾ ಪಿಂಟೋ ಹಾಗೂ ಇತರರು ಯುವಕನನ್ನು ಮನವೊಲಿಸಿ ಕೆಳಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಾಥಮಿಕ ವಿಚಾರಣೆಯ ವೇಳೆ, ತನ್ನ ಪ್ರೀತಿಯ ಸಹೋದರಿಯ ಅಗಲಿಕೆಯಿಂದ ತೀವ್ರ ಮನೋವ್ಯಥೆಗೆ ಒಳಗಾಗಿರುವುದಾಗಿ ಸುಬರತ್ ತಿಳಿಸಿದ್ದಾನೆ. ಆತ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ, ರೈಲ್ವೆ ಪೊಲೀಸರು ಹೆಚ್ಚಿನ ನೆರವಿಗಾಗಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರನ್ನು ಸಂಪರ್ಕಿಸಿದರು.
ಸ್ಥಳಕ್ಕೆ ಆಗಮಿಸಿದ ನಿತ್ಯಾನಂದ ಒಳಕಾಡು ಅವರು ಯುವಕನ ಉಗ್ರ ವರ್ತನೆಯನ್ನು ಕಂಡು, ಸಜಿತ್ ಎಂಬುವವರ ಸಹಾಯದೊಂದಿಗೆ ಆತನನ್ನು ಸುರಕ್ಷಿತವಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ಸಂಬಂಧಿಕರನ್ನು ಪತ್ತೆಹಚ್ಚಲು ಜಿಲ್ಲಾಸ್ಪತ್ರೆಯ ಮೂಲಕ ಪಶ್ಚಿಮ ಬಂಗಾಳದ ಪೊಲೀಸ್ ಇಲಾಖೆಗೆ ಮಾಹಿತಿ ರವಾನಿಸಲಾಗಿದೆ.
ಸಕಾಲದಲ್ಲಿ ಸ್ಪಂದಿಸಿ ಜೀವ ಉಳಿಸಿದ ರೈಲ್ವೆ ರಕ್ಷಣಾ ಪಡೆ ಹಾಗೂ ಸಮಾಜಸೇವಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.



