ನದಿಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರುಪಾಲು: ಮೃತ ಕುಟುಂಬಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಸಾಂತ್ವನ

ಬೆಳಗಾವಿ: ಜಿಲ್ಲೆಯ ಯಮಕನಮರಡಿ ಸಮೀಪದ ಹಳೆ ಗುಡಗನಟ್ಟಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಘಟಪ್ರಭಾ ನದಿಯ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ.
ಹಳೆ ಗುಡಗನಟ್ಟಿ ಗ್ರಾಮದ ನಿವಾಸಿಗಳಾದ ಕೃಷ್ಣ ವಿಠ್ಠಲ್ ಖಾನಾಪುರಿ (14) ಮತ್ತು ಪ್ರಜ್ವಲ್ ಗೋಕಾರ್ (13) ಮೃತಪಟ್ಟ ದುರ್ದೈವಿಗಳು. ಐವರು ಸ್ನೇಹಿತರ ಗುಂಪು ಆಟವಾಡುತ್ತಾ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಈಜಲು ತೆರಳಿದ್ದರು. ಈ ವೇಳೆ ನೀರಿನ ಆಳ ತಿಳಿಯದೇ ಇಬ್ಬರೂ ಬಾಲಕರು ನೀರಿನಲ್ಲಿ ಮುಳುಗಿದ್ದಾರೆ. ಉಳಿದ ಸ್ನೇಹಿತರು ಕೂಗಿಕೊಂಡಾಗ ಸ್ಥಳೀಯರು ಧಾವಿಸಿ ಬಂದರೂ ಬಾಲಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಘಟನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. “ಯಮಕನಮರಡಿ ಕ್ಷೇತ್ರದ ಪುಟ್ಟ ಕಂದಮ್ಮಗಳು ಅಕಾಲಿಕ ಮರಣ ಹೊಂದಿದ ಸುದ್ದಿ ಕೇಳಿ ಮನಸ್ಸಿಗೆ ತುಂಬ ನೋವಾಗಿದೆ. ಆ ಪುಟ್ಟ ಕಂದಮ್ಮಗಳ ಆತ್ಮಕ್ಕೆ ಚಿರಶಾಂತಿ ಸಿಗಲಿ. ಮಕ್ಕಳನ್ನು ಕಳೆದುಕೊಂಡು ಶೋಕದಲ್ಲಿರುವ ಆ ಕುಟುಂಬಗಳಿಗೆ ಈ ದುಃಖ ಭರಿಸುವ ಶಕ್ತಿ ಸಿಗಲಿ,” ಎಂದು ಅವರು ಶೋಕ ವ್ಯಕ್ತಪಡಿಸಿದ್ದಾರೆ.
ಶಾಲಾ ರಜೆಗಳ ಹಿನ್ನೆಲೆಯಲ್ಲಿ ಸಚಿವರು ಪೋಷಕರಿಗೆ ಮಹತ್ವದ ಮನವಿಯೊಂದನ್ನು ಮಾಡಿದ್ದಾರೆ. “ರಜೆಯ ಮೋಜಿನಲ್ಲಿರುವ ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕು. ಜಲಮೂಲಗಳ ಬಳಿ ಹೋಗುವಾಗ ಮಕ್ಕಳ ಸುರಕ್ಷತೆಯ ಬಗ್ಗೆ ಗಮನವಿರಲಿ,” ಎಂದು ಅವರು ಎಚ್ಚರಿಸಿದ್ದಾರೆ.
ಯಮಕನಮರಡಿ ಪೊಲೀಸ್ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಮಕ್ಕಳ ಕುಟುಂಬಗಳಲ್ಲಿ ಸ್ಮಶಾನ ಮೌನ ಆವರಿಸಿದೆ.



