Crime Newsಕ್ರೈಂ ಸುದ್ದಿಜಿಲ್ಲಾ ಸುದ್ದಿರಾಜ್ಯ ಸುದ್ದಿ

ತಿಗಳರಪಾಳ್ಯ: ಮ್ಯಾನೇಜರ್‌ನನ್ನು ಚಾಕುವಿನಿಂದ ಇರಿದು ಕೊಂದ ಮಾಜಿ ಕಾರ್ಮಿಕ; ಹಳೆಯ ವೈಷಮ್ಯಕ್ಕೆ ಭೀಕರ ಅಂತ್ಯ

Share News

ಬೆಂಗಳೂರು: ನಗರದ ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿರುವ ಪ್ಲಾಸ್ಟಿಕ್ ಫ್ಯಾಕ್ಟರಿಯೊಂದರಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮ್ಯಾನೇಜರ್ ಒಬ್ಬರನ್ನು ಮಾಜಿ ಕಾರ್ಮಿಕನೊಬ್ಬ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ತಿಗಳರಪಾಳ್ಯದ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ರಾಹುಲ್ ಎಂಬುವವರು ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ಫ್ಯಾಕ್ಟರಿಯಲ್ಲಿ ಈ ಹಿಂದೆ ಕೆಲಸಕ್ಕಿದ್ದ ಹನುಮಂತಪ್ಪ ಎಂಬಾತನ ಜೊತೆ ರಾಹುಲ್ ಅವರಿಗೆ ಕೆಲಸದ ವಿಚಾರವಾಗಿ ಪದೇ ಪದೇ ಭಿನ್ನಾಭಿಪ್ರಾಯಗಳು ಮೂಡುತ್ತಿದ್ದವು. ಇದೇ ಕಾರಣದಿಂದಾಗಿ ಹನುಮಂತಪ್ಪ ಇತ್ತೀಚೆಗಷ್ಟೇ ಕೆಲಸವನ್ನು ಬಿಟ್ಟಿದ್ದನು ಎನ್ನಲಾಗಿದೆ.

ಕೆಲಸ ಬಿಟ್ಟಿದ್ದರೂ ಮ್ಯಾನೇಜರ್ ರಾಹುಲ್ ವಿರುದ್ಧ ಹನುಮಂತಪ್ಪ ದ್ವೇಷ ಸಾಧಿಸುತ್ತಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಪುನಃ ಮಾತಿನ ಚಕಮಕಿ ಆರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಹನುಮಂತಪ್ಪ, ತನ್ನ ಬಳಿ ಇದ್ದ ಚಾಕುವಿನಿಂದ ಮ್ಯಾನೇಜರ್ ರಾಹುಲ್ ಅವರಿಗೆ ಮನಬಂದಂತೆ ಇರಿದಿದ್ದಾನೆ.

ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಹುಲ್ ಅವರನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅತಿಯಾದ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ರಾಹುಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

​ಘಟನೆ ನಡೆದ ಸ್ಥಳಕ್ಕೆ ರಾಜಗೋಪಾಲ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಹನುಮಂತಪ್ಪನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!