ಯಶವಂತಪುರ APMC ಮಾರುಕಟ್ಟೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ – ರೈತರು, ವ್ಯಾಪಾರಿಗಳ ಸಮಸ್ಯೆ ಆಲಿಕೆ

ಬೆಂಗಳೂರು: ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಪ್ರಾಂಗಣಕ್ಕೆ ಬೆಳ್ಳಂಬೆಳಿಗ್ಗೆ ದಿಢೀರ್ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರು, ವರ್ತಕರು ಮತ್ತು ಶ್ರಮಿಕರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದರು.
ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಆಹಾರ ಧಾನ್ಯಗಳ ದರ, ಆವಕ ಹಾಗೂ ಕಮಿಷನ್ ದಂದೆ ಕುರಿತು ವ್ಯಾಪಾರಸ್ಥರಿಂದ ನೇರವಾಗಿ ಮಾಹಿತಿ ಪಡೆದ ಅವರು, ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಪರಿಶೀಲನೆ ಹಾಗೂ ಪ್ರಮುಖ ಮುಖ್ಯಾಂಶಗಳು:
ಆಮದು ಮತ್ತು ದರ ಪರಿಶೀಲನೆ: ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಹೊರರಾಜ್ಯಗಳಿಂದ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾರುಕಟ್ಟೆಗೆ ಬರುವ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಆಲೂಗಡ್ಡೆ ಇತ್ಯಾದಿ ಪದಾರ್ಥಗಳ ಲಭ್ಯತೆ, ದರ ಹಾಗೂ ಗುಣಮಟ್ಟದ ಕುರಿತು ವರ್ತಕರಿಂದ ವಿವರ ಪಡೆದುಕೊಂಡರು.
ಮಧ್ಯವರ್ತಿಗಳ ಕಮಿಷನ್ ದಂದೆಗೆ ತಡೆ: ರೈತರಿಂದ ಪಡೆಯುತ್ತಿರುವ ಕಮಿಷನ್ ಪ್ರಮಾಣ ಮತ್ತು ಮಾರುಕಟ್ಟೆಯ ಲಾಭಾಂಶದ ವ್ಯತ್ಯಾಸಗಳ ಕುರಿತು ಕಳವಳ ವ್ಯಕ್ತಪಡಿಸಿದ ಸಿಎಂ, ರೈತರಿಗೆ ಅನ್ಯಾಯವಾಗದಂತೆ ಪಾರದರ್ಶಕ ವ್ಯವಸ್ಥೆ ರೂಪಿಸುವುದಾಗಿ ಭರವಸೆ ನೀಡಿದರು.
ಬಾಲಕಾರ್ಮಿಕ ಪದ್ಧತಿ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಮಾರುಕಟ್ಟೆಯಲ್ಲಿ ಸಣ್ಣ ವಯಸ್ಸಿನ ಮಕ್ಕಳು ಕಠಿಣ ಶ್ರಮದ ಕೆಲಸಗಳಲ್ಲಿ ತೊಡಗಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಾಲಕಾರ್ಮಿಕರನ್ನು ನೆಮಿಸಿಕೊಂಡವರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಮೂಲಸೌಕರ್ಯ ಪರಿಶೀಲನೆ: ಮಾರುಕಟ್ಟೆ ಆವರಣದಲ್ಲಿರುವ ಶೌಚಾಲಯಗಳ ನೈರ್ಮಲ್ಯ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಕಾರ್ಮಿಕರ ವಸತಿ ಬೇಡಿಕೆಗಳನ್ನು ವೀಕ್ಷಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
”ರಾಜ್ಯದ ಆರ್ಥಿಕತೆಗೆ ಬೆನ್ನೆಲುಬಾಗಿರುವ ರೈತರು ಮತ್ತು ವ್ಯಾಪಾರಿಗಳ ಹಿತರಕ್ಷಣೆ ನಮ್ಮ ಸರ್ಕಾರದ ಆದ್ಯತೆಯಾಗಿದೆ” ಎಂದ ಸಿಎಂ, ರಾಜ್ಯಾದ್ಯಂತ ಇರುವ APMC ಮಾರುಕಟ್ಟೆಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.



