ಮಳೆಗಾಲದಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯ: ಜೇಸ್ಕಾಂ ವಿರುದ್ಧ ಸಾರ್ವಜನಿಕರ ಆಕ್ರೋಶ

ಯಾದಗಿರಿ: ಜಿಲ್ಲೆಯಲ್ಲಿ ಮಳೆ ಆರಂಭವಾಗುತ್ತಿದ್ದಂತೆ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಜೇಸ್ಕಾಂ (GESCOM) ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ಆರಂಭಕ್ಕೂ ಮುನ್ನವೇ ವಿದ್ಯುತ್ ಮಾರ್ಗಗಳ ಸಮಗ್ರ ನಿರ್ವಹಣೆ, ಮರಗಳ ಕೊಂಬೆಗಳ ತೆರವು, ಹಾಳಾಗಿರುವ ಕಂಬಗಳು ಹಾಗೂ ತಂತಿಗಳ ದುರಸ್ತಿಯಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ಜೇಸ್ಕಾಂ ಸಿಬ್ಬಂದಿ ಈ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮಳೆ ಬಿದ್ದ ತಕ್ಷಣ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವ ಅಧಿಕಾರಿಗಳು, ದುರಸ್ತಿ ನೆಪ ಹೇಳಿ ಗಂಟೆಗಟ್ಟಲೆ ವಿದ್ಯುತ್ ನೀಡುತ್ತಿಲ್ಲ. ಇನ್ನು ಸಮಸ್ಯೆ ಕುರಿತು ದೂರು ನೀಡಲು ಸಾರ್ವಜನಿಕರು ಕರೆ ಮಾಡಿದರೆ, ಸಂಬಂಧಪಟ್ಟ ಅಧಿಕಾರಿಗಳು ಫೋನ್ ಸ್ವೀಕರಿಸುತ್ತಿಲ್ಲ ಎಂಬ ಗಂಭೀರ ದೂರುಗಳು ಕೇಳಿಬಂದಿವೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ವ್ಯತ್ಯಯದಿಂದಾಗಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಕೃಷಿ ಚಟುವಟಿಕೆಗಳು, ವ್ಯಾಪಾರ ವಹಿವಾಟು ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ.
ಆದ್ದರಿಂದ ಜೇಸ್ಕಾಂ ಮೇಲಧಿಕಾರಿಗಳು ತಕ್ಷಣವೇ ಜಾಗೃತರಾಗಿ ವಿದ್ಯುತ್ ಲೈನ್‌ಗಳ ಸಮಗ್ರ ನಿರ್ವಹಣೆ ಕೈಗೊಂಡು, ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಬೇಕು ಮತ್ತು ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಜಿಲ್ಲೆಯ ಜನರು ಆಗ್ರಹಿಸಿದ್ದಾರೆ.



