ಬನ್ನಂಜೆಯ ಆವೈಜ್ಞಾನಿಕ ಡಿವೈಡರ್ ಮುಚ್ಚಲು ಆಗ್ರಹ: ಉಡುಪಿ ಜಿಲ್ಲಾಧಿಕಾರಿಗೆ ‘ನಮ್ಮ ಕರ್ನಾಟಕ ಸೇನೆ’ ಮನವಿ

ಉಡುಪಿ, ಜುಲೈ 16 (2026): ಬನ್ನಂಜೆಯ ಜಯಲಕ್ಷ್ಮೀ ಸಿಲ್ಕ್ ಸೀರೆ ಮಳಿಗೆಯ ಮುಂಭಾಗದಲ್ಲಿರುವ ಆವೈಜ್ಞಾನಿಕ ಡಿವೈಡರ್ (ಮಧ್ಯ ಪಥ) ಅನ್ನು ಕೂಡಲೇ ಮುಚ್ಚಿ, ಸಾರ್ವಜನಿಕ ಹಾಗೂ ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ‘ನಮ್ಮ ಕರ್ನಾಟಕ ಸೇನೆ’ ಸಂಘಟನೆಯ ಉಡುಪಿ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿ ಮತ್ತು ಮಾನ್ಯ ದಂಡಾಧಿಕಾರಿಗಳಾದ ಶ್ರೀಮತಿ ಸ್ವರೂಪ ಟಿ.ಕೆ. ಅವರಿಗೆ ಇಂದು (ಗುರುವಾರ) ಜಂಟಿ ಮನವಿ ಸಲ್ಲಿಸಿತು.
ಉಡುಪಿ ನಗರದ ಸಿಟಿ ಹಾಗೂ ಸರ್ವೀಸ್ ಬಸ್ ನಿಲ್ದಾಣದಿಂದ ಕರಾವಳಿ ಬೈಪಾಸ್ಗೆ ಸಂಪರ್ಕ ಕಲ್ಪಿಸುವ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ರಸ್ತೆಯು ಅತ್ಯಂತ ಜನನಿಬಿಡವಾಗಿದೆ. ಬಡ ವಾಹನ ಚಾಲಕರು, ದಿನನಿತ್ಯದ ಪ್ರಯಾಣಿಕರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ, ಜಯಲಕ್ಷ್ಮೀ ಸಿಲ್ಕ್ ಸೀರೆ ಮಳಿಗೆ ಹಾಗೂ ಪೆಟ್ರೋಲ್ ಬಂಕ್ ಸಮೀಪದಲ್ಲಿ ರಸ್ತೆ ಮಧ್ಯದ ಪಥ ರೇಖೆಯನ್ನು (ಡಿವೈಡರ್) ಆವೈಜ್ಞಾನಿಕವಾಗಿ ಕತ್ತರಿಸಲಾಗಿದ್ದು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಘನ ಮತ್ತು ಲಘು ವಾಹನಗಳನ್ನು ಬೇಕಾಬಿಟ್ಟಿಯಾಗಿ ಇಲ್ಲಿ ತಿರುಗಿಸುತ್ತಿದ್ದಾರೆ.
ಈ ಭಾಗದಲ್ಲಿ ವಾಹನಗಳನ್ನು ನಿಯಂತ್ರಿಸಲು ಯಾವುದೇ ಸಂಚಾರಿ ಪೊಲೀಸ್ ಸಿಬ್ಬಂದಿ ಇರುವುದಿಲ್ಲ. ಅಡ್ಡದಿಡ್ಡಿಯಾಗಿ ವಾಹನಗಳನ್ನು ಚಲಾಯಿಸುವುದರಿಂದಾಗಿ ಈಗಾಗಲೇ ಹಲವಾರು ಭೀಕರ ರಸ್ತೆ ಅಪಘಾತಗಳು ಸಂಭವಿಸಿ, ಸಾರ್ವಜನಿಕರ ಪ್ರಾಣಕ್ಕೆ ಹಾನಿಯಾಗಿದೆ. ಆದರೂ ಸ್ಥಳೀಯ ಜಿಲ್ಲಾಡಳಿತ ಹಾಗೂ ಆರಕ್ಷಕ ಇಲಾಖೆ ಯಾವುದೇ ಎಚ್ಚರಿಕೆ ವಹಿಸದಿರುವುದು ಖೇದಕರ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಜಯಲಕ್ಷ್ಮೀ ಸಿಲ್ಕ್ಸ್ ಮುಂಭಾಗ ಕತ್ತರಿಸಲಾಗಿರುವ ರಸ್ತೆ ಮಧ್ಯದ ಪಥ ರೇಖೆಯನ್ನು (ಡಿವೈಡರ್) ತಕ್ಷಣವೇ ಸಂಪೂರ್ಣವಾಗಿ ಮುಚ್ಚಬೇಕು.
ರಾಷ್ಟ್ರೀಯ ಹೆದ್ದಾರಿ ಹಾಗೂ ಉಡುಪಿ ನಗರ ವ್ಯಾಪ್ತಿಯ ರಸ್ತೆಗಳ ಉಭಯ ಪಾರ್ಶ್ವಗಳಲ್ಲಿ ಹಾಗೂ ರಸ್ತೆ ಮಧ್ಯದಲ್ಲಿ ಘನ, ಲಘು ಮತ್ತು ದ್ವಿಚಕ್ರ ವಾಹನಗಳನ್ನು ಅಡ್ಡದಿಡ್ಡಿಯಾಗಿ ಪಾರ್ಕಿಂಗ್ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.
ದಿನನಿತ್ಯದ ಪ್ರಯಾಣಿಕರಿಗೆ ಹಾಗೂ ವಾಹನ ಸವಾರರಿಗೆ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
ನಿದ್ರಾವಸ್ಥೆಯಲ್ಲಿರುವ ಸಂಬಂಧಪಟ್ಟ ಇಲಾಖಾ ನೌಕರರು ಹಾಗೂ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ತಕ್ಷಣವೇ ಜಾಗೃತಗೊಳಿಸಿ ಈ ಸಮಸ್ಯೆಗೆ ಪರಿಹಾರ ನೀಡಬೇಕು. ಒಂದು ವೇಳೆ ಸಾರ್ವಜನಿಕರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸದಿದ್ದರೆ, ‘ನಮ್ಮ ಕರ್ನಾಟಕ ಸೇನೆ’ಯ ಉಡುಪಿ ಮತ್ತು ದಕ್ಷಿಣ ಕನ್ನಡ ಉಭಯ ಜಿಲ್ಲಾ ಘಟಕಗಳ ವತಿಯಿಂದ ಉಡುಪಿಯಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು,” ಎಂದು ಸಂಘಟನೆಯ ನಾಯಕರು ಎಚ್ಚರಿಸಿದ್ದಾರೆ.
ಮನವಿ ಸಲ್ಲಿಕೆಯ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ಉಡುಪಿ ಜಿಲ್ಲಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಉಸ್ತುವಾರಿಯಾದ ಸುಜಯ್ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಆನಂದ್ ಶೆಟ್ಟಿ, ಜಿಲ್ಲಾ ಮಹಿಳಾಧ್ಯಕ್ಷೆ ಅನಿತಾ ಬಿ.ವಿ., ಜಿಲ್ಲಾ ಮಹಿಳಾ ಕಾರ್ಯದರ್ಶಿ ಗೀತಾ ಬಾಲಕೃಷ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಬ್ಬಣ್ಣ ಕಾಮತ್, ಜಿಲ್ಲಾ ಸಲಹೆಗಾರ ತೇಜಸ್ ರಾವ್ ಉಪಸ್ಥಿತರಿದ್ದರು.
ಹಾಗೂ ಜಿಲ್ಲಾ ಕಾರ್ಮಿಕ ಅಧ್ಯಕ್ಷ ಸಿದ್ದಣ್ಣ ಪೂಜಾರಿ, ಜಿಲ್ಲಾ ಕಾರ್ಮಿಕ ಉಪಾಧ್ಯಕ್ಷ ಮೊಹಮ್ಮದ್ ಜಾಫರ್, ಜಿಲ್ಲಾ ಕೋಶಾಧಿಕಾರಿ ವಿಶ್ವನಾಥ್, ಜಿಲ್ಲಾ ಜಾಲತಾಣ ಸಂಚಾಲಕ ಪ್ರದೀಪ್, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ್ ಆಚಾರ್ಯ, ಆಟೋ ತಾಲೂಕು ಅಧ್ಯಕ್ಷ ಸತೀಶ್, ಆಟೋ ತಾಲೂಕು ಉಪಾಧ್ಯಕ್ಷ ಶ್ರೀಧರ್, ಜಿಲ್ಲಾ ಸದಸ್ಯ ಸುಬ್ರಹ್ಮಣ್ಯ ಹಾಗೂ ಮೊದಲ ದೇವರು ಸೇರಿದಂತೆ ಸಂಘಟನೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು.



