ರಸ್ತೆ ಬದಿ ಅನಧಿಕೃತವಾಗಿ ನಿಲ್ಲಿಸಿದ್ದ 382 ವಾಹನಗಳಿಗೆ ನೋಟಿಸ್ ಅಂಟಿಸಿದ ಪಾಲಿಕೆ!

ಮೈಸೂರು: ನಗರದ ಸಾರ್ವಜನಿಕ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ದೀರ್ಘಕಾಲದಿಂದ ಅನಧಿಕೃತವಾಗಿ ನಿಲುಗಡೆ ಮಾಡಿರುವ ಮತ್ತು ಬಳಕೆಯಲ್ಲಿಲ್ಲದ ವಾಹನಗಳ ವಿರುದ್ಧ ಮೈಸೂರು ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 382 ಅನುಪಯುಕ್ತ ವಾಹನಗಳನ್ನು ಗುರುತಿಸಲಾಗಿದ್ದು, ಅವುಗಳಿಗೆ ತೆರವು ನೋಟಿಸ್ ಅಂಟಿಸುವ ಕಾರ್ಯಕ್ಕೆ ಪಾಲಿಕೆ ಆಯುಕ್ತರಾದ ಶ್ರೀಮತಿ ಸವಿತಾ ಎಂ.ಕೆ. ಚಾಲನೆ ನೀಡಿದ್ದಾರೆ.
ಸಾರ್ವಜನಿಕ ಸಂಚಾರಕ್ಕೆ ಅಡಚಣೆ, ನಗರದ ಸೌಂದರ್ಯಕ್ಕೆ ಧಕ್ಕೆ ಹಾಗೂ ತ್ಯಾಜ್ಯ ಸಂಗ್ರಹಣೆಯಿಂದ ರೋಗವಾಹಕ ಸೊಳ್ಳೆಗಳ ಉತ್ಪತ್ತಿಗೆ ಇಂತಹ ವಾಹನಗಳು ಕಾರಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪಾಲಿಕೆಯು ಸೂಕ್ತ ಕ್ರಮ ಜರುಗಿಸಿದೆ.
ಪಾಲಿಕೆಯ ಪ್ರಮುಖ ಸೂಚನೆಗಳು:
ನೋಟಿಸ್ ಅಂಟಿಸಿದ 7 ದಿನಗಳೊಳಗಾಗಿ ವಾಹನ ಮಾಲೀಕರು ತಮ್ಮ ವಾಹನಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು.
ನಿಗದಿತ ಅವಧಿಯಲ್ಲಿ ತೆರವುಗೊಳಿಸದಿದ್ದಲ್ಲಿ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಕಲಂ 127 ಹಾಗೂ ಪಾಲಿಕೆ ಉಪವಿಧಿಗಳನ್ವಯ ಟೋಯಿಂಗ್ ಮೂಲಕ ತೆರವುಗೊಳಿಸಲಾಗುವುದು.
ತೆರವು ಹಾಗೂ ಸಾಗಾಣಿಕೆ ವೆಚ್ಚವನ್ನು ವಾಹನ ಮಾಲೀಕರಿಂದಲೇ ವಸೂಲಿ ಮಾಡಲಾಗುತ್ತದೆ. ಅಗತ್ಯ ಬಿದ್ದರೆ ವಾಹನವನ್ನು ಹರಾಜು ಅಥವಾ ಸ್ಕ್ರ್ಯಾಪ್ ಮಾಡಲಾಗುವುದು.
ಸಾರ್ವಜನಿಕರು ಹಾಗೂ ವಾಹನ ಮಾಲೀಕರು ಪಾಲಿಕೆಯ ಈ ಕ್ರಮಕ್ಕೆ ಸಹಕರಿಸಿ, ರಸ್ತೆಗಳನ್ನು ಮುಕ್ತವಾಗಿಡಲು ಆಯುಕ್ತರು ಮನವಿ ಮಾಡಿದ್ದಾರೆ.



