ಟ್ರೆಂಡಿಂಗ್ ಸುದ್ದಿಗಳುಕ್ರೈಂ ಸುದ್ದಿತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಕೊಪ್ಪಳ ಜಿಲ್ಲಾ ಪೊಲೀಸರ ಕಾರ್ಯಾಚರಣೆಗೆ ಬಳ್ಳಾರಿ ವಲಯ ಐಜಿಪಿ ಡಾ. ಪಿ.ಎಸ್. ಹರ್ಷ ಶ್ಲಾಘನೆ

Share News

ಕೊಪ್ಪಳ: ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಸೋಮವಾರ (ಜುಲೈ 20) ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ, ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಬೃಹತ್ ಪ್ರಮಾಣದ ಮುದ್ದೆಮಾಲನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಇದೇ ವೇಳೆ, ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

​ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕರಾದ (IGP) ಡಾ. ಪಿ.ಎಸ್. ಹರ್ಷ ಅವರು ವಾರಸುದಾರರಿಗೆ ಮಾಲನ್ನು ಮರಳಿ ನೀಡಿ, ಜಿಲ್ಲಾ ಪೊಲೀಸ್ ತಂಡದ ದಕ್ಷತೆ ಹಾಗೂ ತಾಂತ್ರಿಕ ಕೌಶಲ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

​2025 ರ ಜನವರಿ 1 ರಿಂದ 2026 ರ ಜೂನ್ 30 ರವರೆಗೆ ಜಿಲ್ಲೆಯಲ್ಲಿ ವರದಿಯಾಗಿದ್ದ 252 ಸ್ವತ್ತು ಕಳವು ಪ್ರಕರಣಗಳ ಪೈಕಿ 104 ಪ್ರಕರಣಗಳನ್ನು ಭೇದಿಸಿ, ಒಟ್ಟು ₹1,82,45,960 ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿತ್ತು.

​ಹಸ್ತಾಂತರಿಸಲಾದ ಮುದ್ದೆಮಾಲಿನ ವಿವರ:

​ನಗದು ಹಣ: ₹43,33,830

​ಸೈಬರ್ ಅಪರಾಧದಲ್ಲಿ ಪತ್ತೆಯಾದ ಹಣ: ₹33,49,662

​ಚಿನ್ನಾಭರಣ: 988.960 ಗ್ರಾಂ

​ಬೆಳ್ಳಿ ಆಭರಣ: 10 ಕೆಜಿ

​ಮೊಬೈಲ್ ಫೋನ್‌ಗಳು: CEIR ಪೋರ್ಟಲ್ ಮೂಲಕ ಪತ್ತೆಯಾದ 1,905 ಮೊಬೈಲ್‌ಗಳು

​ವಾಹನಗಳು: 34 ದ್ವಿಚಕ್ರ ವಾಹನಗಳು, 6 ಕಾರುಗಳು (4 ಚಕ್ರ) ಹಾಗೂ 3 ಆಟೋಗಳು (3 ಚಕ್ರ)

​ಕಳೆದುಹೋದ ತಮ್ಮ ವಾಹನ, ನಗದು ಹಾಗೂ ಒಡವೆಗಳನ್ನು ಮರಳಿ ಪಡೆದ ವಾರಸುದಾರರು ಪೊಲೀಸ್ ಇಲಾಖೆಯ ತ್ವರಿತ ಹಾಗೂ ಪ್ರಾಮಾಣಿಕ ಸೇವೆಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.

​ಪ್ರತಿಭಾ ಪುರಸ್ಕಾರ: ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ಪೊಲೀಸ್ ಕುಟುಂಬದ 53 ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಂಸನಾ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.

​ಮೊಬೈಲ್ ಫೋರೆನ್ಸಿಕ್ ಲ್ಯಾಬ್: ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಯ ನೂತನ ‘ಮೊಬೈಲ್ ಫೋರೆನ್ಸಿಕ್ ಲ್ಯಾಬ್’ ವಾಹನಕ್ಕೆ ಐಜಿಪಿ ಡಾ. ಪಿ.ಎಸ್. ಹರ್ಷ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

​ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಜಿಪಿ ಅವರು, ಜಿಲ್ಲೆಯಲ್ಲಿ ಅಪರಾಧ ತಡೆಗೆ ರಾತ್ರಿ ಗಸ್ತು ಚುರುಕುಗೊಳಿಸುವುದು, ಸಿಸಿಟಿವಿ ಅಳವಡಿಕೆ ಹಾಗೂ ಹಳೆಯ ಅಪರಾಧಿಗಳ ಮೇಲೆ ತೀವ್ರ ನಿಗಾ ಇಡಲು ಸೂಚಿಸಲಾಗಿದೆ ಎಂದರು. ಅಲ್ಲದೆ, ರಾಜ್ಯ ಸರ್ಕಾರದ “ಆಪರೇಷನ್ ರೈಸ್ ಮತ್ತು ಬೇಡ ಬ್ರೋ” ಧ್ಯೇಯವಾಕ್ಯದೊಂದಿಗೆ ‘ನಶೆ ಮುಕ್ತ ಕರ್ನಾಟಕ’ ಅಭಿಯಾನದಡಿ ಯುವಜನರಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ವಹಿಸಿದ್ದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತ್ ಕುಮಾರ್, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಗಂಗಾವತಿ ಡಿವೈಎಸ್ಪಿ ಜೆ. ನ್ಯಾಮನಗೌಡರ, ಸೈಬರ್ ವಿಭಾಗದ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ಡಿಎಆರ್ ಡಿವೈಎಸ್ಪಿ ಶಶಿಧರಯ್ಯ ಹಿರೇಮಠ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಫಲಾನುಭವಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಕೆ.ಹೆಚ್. ಕಳಕಬಂಡಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!