ಮಡಿಕೇರಿ: ಕಾಡುಕೋಣ ಬೇಟೆಯಾಡಿ ಮಾಂಸ ಸಾಗಾಟ, ಅರಣ್ಯ ಸಿಬ್ಬಂದಿ ಗುಂಡಿನ ಚಕಮಕಿ – ಇಬ್ಬರು ಆರೋಪಿಗಳಿಗೆ ಗಾಯ

ಮಡಿಕೇರಿ: ತಾಲೂಕಿನ ಕಾಲೂರು ಗ್ರಾಮದ ಬಳಿ ಕಾಡುಕೋಣವನ್ನು ಅಕ್ರಮವಾಗಿ ಬೇಟೆಯಾಡಿ ಜೀಪಿನಲ್ಲಿ ಮಾಂಸ ಸಾಗಾಟ ಮಾಡುತ್ತಿದ್ದ ಬೇಟೆಗಾರರ ತಂಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಆರೋಪಿಗಳು ಗಾಯಗೊಂಡಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಸಕಾಲದಲ್ಲಿ ನಡೆಸಿದ ಜಾಗರೂಕ ಕಾರ್ಯಾಚರಣೆಯಿಂದ ಅಕ್ರಮ ಬೇಟೆ ಜಾಲವನ್ನು ಭೇದಿಸಲಾಗಿದೆ.
ಕಾಲೂರು ಗ್ರಾಮದ ವ್ಯಾಪ್ತಿಯಲ್ಲಿ ಕಾಡುಕೋಣವನ್ನು ಕೊಂದು, ಅದರ ಮಾಂಸವನ್ನು ಜೀಪಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು.
ಈ ವೇಳೆ ತಪಾಸಣೆಗೆ ಮುಂದಾದ ಸಿಬ್ಬಂದಿಯನ್ನು ಕಂಡು ಪರಾರಿಯಾಗಲು ಯತ್ನಿಸಿದ ಆರೋಪಿಗಳ ಜೀಪಿನ ಮೇಲೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಆರೋಪಿಗಳು ಗಾಯಗೊಂಡಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆ ವೇಳೆ ಅರಣ್ಯಾಧಿಕಾರಿಗಳು ಆರೋಪಿಗಳು ಬಳಸಿದ್ದ ಜೀಪ್, ಕಾಯ್ದಿರಿಸಿದ ಕಾಡುಕೋಣದ ಮಾಂಸ ಹಾಗೂ ಬೇಟೆಗೆ ಬಳಸಿದ್ದ ಮಾರಕ ಆಯುಧಗಳು ಮತ್ತು ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಘಟನೆಯಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳ ಪತ್ತೆಗಾಗಿ ತನಿಖೆ ತೀವ್ರಗೊಳಿಸಿದ್ದಾರೆ.



