ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ಪಾರದರ್ಶಕವಾಗಿ ನಡೆಸಲು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಕಟ್ಟುನಿಟ್ಟಿನ ಸೂಚನೆ!

ದಾವಣಗೆರೆ : ಆಗಸ್ಟ್ 2 ರಂದು ಬೆಳಿಗ್ಗೆ 10.30 ರಿಂದ 12.00 ಗಂಟೆಯವರೆಗೆ ನಗರದ ವಿವಿಧ 19 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ‘ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್’ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕ, ಶಿಸ್ತುಬದ್ಧ ಹಾಗೂ ಭದ್ರತೆಯಿಂದ ನಡೆಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಸೂಚನೆ ನೀಡಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಳ್ಳಬೇಕಾದ ಭದ್ರತೆ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಗಂಭೀರ ನಿರ್ದೇಶನ ನೀಡಿದರು.
ಪರೀಕ್ಷಾ ಕೇಂದ್ರಗಳಿಗೆ ಶಿವಧಾರ, ಜನಿವಾರ, ಉಡುದಾರ, ಮಾಂಗಲ್ಯ, ಮೂಗುತಿ ಮತ್ತು ವಿಭೂತಿ ಧರಿಸಿ ಬರಲು ಅವಕಾಶ ನೀಡಲಾಗಿದೆ. ನಿಯೋಜಿತ ಸಿಬ್ಬಂದಿ ಅಭ್ಯರ್ಥಿಗಳ ಫ್ರಿಸ್ಕಿಂಗ್ (ಅಂಗಶೋಧನೆ) ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ನಡೆಸಬೇಕು. ಪ್ರಾಧಿಕಾರದಿಂದ ನೇಮಕಗೊಂಡ ನೊಡಲ್ ಅಧಿಕಾರಿಗಳು ಫೇಶಿಯಲ್ ರೆಕಗ್ನಿಷನ್, ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಸಂಪರ್ಕ ಸಾಧನಗಳ ಕಾರ್ಯವೈಖರಿಯನ್ನು ತಪಾಸಣೆ ನಡೆಸಬೇಕು. ಯಾವುದೇ ಅನಗತ್ಯ ಅಥವಾ ತಾಂತ್ರಿಕ ಸಾಧನಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರೀಕ್ಷಾರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ, ಬೆಳಕು ಹಾಗೂ ಕೊಠಡಿಗಳಲ್ಲಿ ಗಡಿಯಾರ ವ್ಯವಸ್ಥೆ ಮಾಡುವುದು ಕಡ್ಡಾಯವಾಗಿದೆ ಎಂದರು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಕಲಂ 163 ರನ್ವಯ ಪರೀಕ್ಷಾ ದಿನದಂದು 19 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಅವಧಿಯಲ್ಲಿ ಸುತ್ತಮುತ್ತಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳು ಹಾಗೂ ಸೈಬರ್ ಕೆಫೆಗಳನ್ನು ಕಡ್ಡಾಯವಾಗಿ ಮುಚ್ಚಲು ಆದೇಶಿಸಲಾಗಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚಿಸಲಾಗಿದೆ.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್ ಹೆಚ್.ಟಿ ಅವರು, “ಒಟ್ಟು 11,033 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಎಲ್ಲಾ ಕೇಂದ್ರಗಳನ್ನು ಪರಿಶೀಲಿಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಅಕ್ರಮ ಎಸಗುವುದು ಕಂಡುಬಂದರೆ ಅಂತವರ ವಿರುದ್ಧ ₹15 ಲಕ್ಷದಿಂದ ₹1 ಕೋಟಿವರೆಗೂ ದಂಡ ಹಾಗೂ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು” ಎಂದು ಎಚ್ಚರಿಸಿದರು.
ಸಭೆಯಲ್ಲಿ ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿ ಶರಣಬಸವೇಶ್ವರ, ಡಿಡಿಪಿಯು ಪಳನಿಸ್ವಾಮಿ ಹಾಗೂ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.



