ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಮಹಿಳೆಯರ ಸುರಕ್ಷತೆ, ಜಾಗೃತಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಕರೆ: ದಾವಣಗೆರೆಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ

Share News

ದಾವಣಗೆರೆ: ಮಹಿಳೆಯರು ಯಾವುದೇ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳದೆ, ಆರ್ಥಿಕ ಸ್ವಾವಲಂಬನೆ ಸಾಧಿಸಿ ಗೌರವಯುತ ಜೀವನ ನಡೆಸಬೇಕು. ಸೈಬರ್ ಅಪರಾಧಗಳು, ಸಾಮಾಜಿಕ ಜಾಲತಾಣಗಳ ನಕಲಿ ಪ್ರೇಮ ಜಾಲ ಹಾಗೂ ಬ್ಲ್ಯಾಕ್‌ಮೇಲ್ ವಿರುದ್ಧ ಯುವತಿಯರು ಮತ್ತು ವಿದ್ಯಾರ್ಥಿನಿಯರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಕರೆ ನೀಡಿದರು.

​ಜಿಲ್ಲಾಡಳಿತ ಕಚೇರಿ ಆವರಣದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಅರಿವು ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

​ಸಂವಾದದ ಪ್ರಮುಖ ಅಂಶಗಳು:

​ಸಾಮಾಜಿಕ ಜಾಲತಾಣದ ಜಾಗೃತಿ: ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಆಪ್‌ಗಳ ಮೂಲಕ ಅಪರಿಚಿತರ ಸ್ನೇಹ ಬೆಳೆಸುವಾಗ ಜಾಗರೂಕರಾಗಿರಬೇಕು. ಖಾಸಗಿ ವಿಡಿಯೋಗಳು ಅಥವಾ ಆನ್‌ಲೈನ್ ಬೆದರಿಕೆಗಳಿಗೆ ಹೆದರಿ ಮೌನವಾಗಿ ಕಿರುಕುಳ ಸಹಿಸದೆ, ತಕ್ಷಣವೇ ಪೊಲೀಸ್ ಇಲಾಖೆ ಅಥವಾ ಮಹಿಳಾ ಆಯೋಗಕ್ಕೆ ದೂರು ನೀಡಬೇಕು.

​ಶಿಕ್ಷಣಕ್ಕೆ ಮೊದಲ ಆದ್ಯತೆ: ಅಪ್ರಾಪ್ತ ವಯಸ್ಸಿನಲ್ಲಿ ಪ್ರೇಮಪಾಶಕ್ಕೆ ಬಿದ್ದು ಶಿಕ್ಷಣ ಹಾಗೂ ಭವಿಷ್ಯವನ್ನು ಹಾಳುಮಾಡಿಕೊಳ್ಳಬಾರದು. ಶೇ. 75ಕ್ಕೂ ಹೆಚ್ಚು ಪೋಕ್ಸೋ ಹಾಗೂ ಪ್ರೇಮ ಪ್ರಕರಣಗಳಲ್ಲಿ ಯುವತಿಯರ ಜೀವನ ಹಾಳಾಗುತ್ತಿದ್ದು, ಪ್ರತಿಯೊಬ್ಬ ಹೆಣ್ಣುಮಗಳು ಮೊದಲು ಶಿಕ್ಷಣ ಪಡೆದು ಸ್ವಾವಲಂಬಿಯಾಗಬೇಕು.

​ಸಹಾಯವಾಣಿಗಳ ಸದುಪಯೋಗ: ತುರ್ತು ಸಂದರ್ಭದಲ್ಲಿ ಪೊಲೀಸರ ರಕ್ಷಣೆಗೆ 112, ಮಕ್ಕಳ ನೆರವಿಗೆ 1098, ಮಹಿಳೆಯರ ಸುರಕ್ಷತೆಗೆ 181 ಹಾಗೂ ಸೈಬರ್ ಕ್ರೈಂ ದೂರುಗಳಿಗೆ 1930 ಸಹಾಯವಾಣಿ ಸಂಖ್ಯೆಗಳನ್ನು ಬಳಸಿಕೊಳ್ಳಲು ತಿಳಿಸಲಾಯಿತು.

​ವಿದ್ಯಾರ್ಥಿನಿಯರ ಮನವಿ ಹಾಗೂ ಜಿಲ್ಲಾಧಿಕಾರಿಗಳ ಭರವಸೆ:

ಸಂವಾದದಲ್ಲಿ ವಿದ್ಯಾರ್ಥಿನಿ ಪ್ರೀತಿ ಅವರು ಅಂಬೇಡ್ಕರ್ ವಸತಿ ನಿಲಯದಲ್ಲಿ ಕುಡಿಯುವ ನೀರು, ಬಿಸಿನೀರು, ನೈರ್ಮಲ್ಯ ಹಾಗೂ ಊಟದ ಸೌಲಭ್ಯ ಸುಧಾರಿಸಬೇಕೆಂದು ಗಮನ ಸೆಳೆದರು. ಅಲ್ಲದೆ, ಜೆ.ಎಚ್. ಪಟೇಲ್ ಬಡಾವಣೆಯ ಹಾಸ್ಟೆಲ್ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಬೆಳಿಗ್ಗೆ 8.00 ಗಂಟೆಗೆ ಹೆಚ್ಚುವರಿ ಕೆಎಸ್‌ಆರ್‌ಟಿಸಿ (KSRTC) ಬಸ್ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.

​ಈ ಕುರಿತು ಸ್ಪಂದಿಸಿದ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಅವರು, ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ 16 ಹೊಸ ಹಾಸ್ಟೆಲ್‌ಗಳು ಮಂಜೂರಾಗಿದ್ದು ಶೀಘ್ರದಲ್ಲೇ ನಿರ್ಮಾಣವಾಗಲಿವೆ. ಬಾಡಿಗೆ ಕಟ್ಟಡಗಳಲ್ಲಿರುವ ಹಾಸ್ಟೆಲ್‌ಗಳ ಶೌಚಾಲಯ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

​ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್‌ ಹೆಚ್.ಟಿ, ಎಎಸ್ಪಿ ಪರಮೇಶ್ವರ ಹೆಗಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಾನಾಯ್ಕ್‌, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!