ಕರ್ತವ್ಯನಿರತ ಟ್ರಾಫಿಕ್ ಕಾನ್ಸ್‌ಸ್ಟೇಬಲ್ ಮೇಲೆ ಹಲ್ಲೆ: JDS ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ಬಂಧನ

ಬೆಂಗಳೂರು (ಆ. 17): ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ ಅಲಿಯಾಸ್ ಮಂಜಣ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಗೊಟ್ಟಿಗೆರೆ ಜಂಕ್ಷನ್‌ನಲ್ಲಿ ಹುಳಿಮಾವು ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಅರುಣ್ ಅವರು ವಾಹನ ಸಂಚಾರ ನಿಯಂತ್ರಿಸುತ್ತಿದ್ದಾಗ ಈ ಘಟನೆ ನಡೆದಿದೆ. ಟ್ರಾಫಿಕ್ ಹೆಚ್ಚಿದ್ದರಿಂದ ಮಂಜುನಾಥ್ ಅವರ ವಾಹನವನ್ನು ನಿಲ್ಲಿಸುವಂತೆ ಸಿಬ್ಬಂದಿ ಸೂಚಿಸಿದ್ದರು. ಇದರಿಂದ ಕೆರಳಿದ ಮಂಜುನಾಥ್, ಕಾರಿನಿಂದ ಕೆಳಗಿಳಿದು “ನನ್ನ ಗಾಡಿಯನ್ನೇ ನಿಲ್ಲಿಸುತ್ತೀಯಾ?” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅರುಣ್ ಅವರ ಕಾಲರ್ ಹಿಡಿದು ಹಲ್ಲೆ ನಡೆಸಿದ್ದಾರೆ ಹಾಗೂ ಒದೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಹೋಟೆಲ್‌ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆ:
ಘಟನೆ ಬಳಿಕ ಸಾರ್ವಜನಿಕರು ಮಧ್ಯಪ್ರವೇಶಿಸಿದ್ದು, ಹುಳಿಮಾವು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಮಂಜುನಾಥ್ ತಲೆಮರೆಸಿಕೊಂಡಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರು ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಜನಪ್ರತಿನಿಧಿಯೊಬ್ಬರು ಕರ್ತವ್ಯನಿರತ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ಘಟನಾ ಸ್ಥಳದ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರಿಸಿದ್ದಾರೆ.



