ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಮಗನನ್ನು ಕಳೆದುಕೊಂಡ ನೋವಿನಲ್ಲೂ ಮಾನವೀಯ ನಿರ್ಧಾರ: ಅಂಗಾಂಗ ದಾನದಿಂದ ಹಲವು ಜೀವಗಳಿಗೆ ಹೊಸ ಉಸಿರು ನೀಡಿದ ಹೆತ್ತವರು

Share News

ಆನೇಕಲ್: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ (ಬ್ರೈನ್ ಡೆಡ್) 19 ವರ್ಷದ ರ‍್ಯಾಂಕ್ ವಿದ್ಯಾರ್ಥಿ ಸಂಜನ್ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅವರ ಪೋಷಕರು ಹಲವರ ಬಾಳಿಗೆ ಬೆಳಕಾಗಿದ್ದಾರೆ. ಏಕೈಕ ಮಗನನ್ನು ಕಳೆದುಕೊಂಡ ಕಡಲಷ್ಟೇ ದೊಡ್ಡ ದುಃಖದ ನಡುವೆಯೂ ಹೆತ್ತವರು ಕೈಗೊಂಡ ಈ ಉದಾತ್ತ ಹಾಗೂ ಮಾನವೀಯ ನಿರ್ಧಾರ ಸಮಾಜಕ್ಕೆ ಮಾದರಿಯಾಗಿದೆ.

​ಬೆಂಗಳೂರಿನ ರಾಜಾಜಿನಗರದ ನಿವಾಸಿಯಾಗಿದ್ದ ಸಂಜನ್, ವಿದ್ಯಾಭ್ಯಾಸದಲ್ಲಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ತಮ್ಮ ಕುಟುಂಬದ ಆಟೋಮೊಬೈಲ್ ಉದ್ಯಮವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕನಸು ಕಂಡಿದ್ದರು.

​ಜುಲೈ 8ರಂದು ಕುಟುಂಬದೊಂದಿಗೆ ತಮಿಳುನಾಡಿನ ತಿರುಚ್ಚಂದೂರು ಮುರುಗನ್ ದೇವಸ್ಥಾನದ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ರಾಯಕೋಟೆ ಸಮೀಪ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ ಸಂಜನ್ ಹಾಗೂ ಅವರ ಅಜ್ಜಿ ಸುಬ್ಬಲಕ್ಷ್ಮಿ ತೀವ್ರವಾಗಿ ಗಾಯಗೊಂಡಿದ್ದರು.

​ತಲೆಗೆ ಬಲವಾದ ಪೆಟ್ಟು ಬಿದ್ದಿದ್ದ ಸಂಜನ್ ಅವರಿಗೆ ಮೊದಲು ಮೀರಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಹೊಸೂರಿನ ಕಾವೇರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಸಂಜನ್ ಅವರ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿದೆ (ಬ್ರೈನ್ ಡೆಡ್) ಎಂದು ವೈದ್ಯರು ಸ್ಪಷ್ಟಪಡಿಸಿದರು.

​ತಮ್ಮ ಏಕೈಕ ಮಗ ಇನ್ನು ಬದುಕುವುದಿಲ್ಲ ಎಂಬ ಕಹಿ ಸತ್ಯ ತಿಳಿದಾಗಲೂ ಧೃತಿಗೆಡದ ತಂದೆ ಲೋಕೇಶ್ ಹಾಗೂ ತಾಯಿ ಶ್ವೇತಾ, ಮಗನ ನೆನಪನ್ನು ಅಮರವಾಗಿಸಲು ಅಂಗಾಂಗ ದಾನಕ್ಕೆ ಮಹತ್ವದ ಸಮ್ಮತಿ ನೀಡಿದರು.

​ವೈದ್ಯಕೀಯ ತಂಡವು ಸಂಜನ್ ಅವರ ಕಣ್ಣುಗಳು, ಹೃದಯ, ಶ್ವಾಸಕೋಶ, ಲಿವರ್ ಹಾಗೂ ಕಿಡ್ನಿಗಳನ್ನು ಯಶಸ್ವಿಯಾಗಿ ಹೊರತೆಗೆದು, ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 7 ರಿಂದ 8 ಜನ ರೋಗಿಗಳಿಗೆ ಮರುಜೀವ ನೀಡಿದೆ. ಅಕಾಲಿಕವಾಗಿ ಸಂಜನ್ ಅಗಲಿದ್ದರೂ, ಅವರ ಅಂಗಾಂಗಗಳು ಹಲವು ಜೀವಗಳಲ್ಲಿ ಹೊಸ ಆಶಾಕಿರಣವಾಗಿ ಬೆಳಗುತ್ತಿದ್ದು, ಪೋಷಕರ ಈ ನಿರ್ಧಾರ ಮಾನವೀಯತೆಯ ಅಪೂರ್ವ ಉದಾಹರಣೆಯಾಗಿ ಮೂಡಿಬಂದಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!