ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ಇಲಾಖೆಯ ಜನಪರ ಜಾಗೃತಿ: ಕರ್ತವ್ಯ ನಿಷ್ಠ ಸಿಬ್ಬಂದಿಗೆ ಡಿಸಿಪಿ ಶಾಲೂ ಐಪಿಎಸ್ ಅವರಿಂದ ಪ್ರಶಂಸನಾ ಪತ್ರ ವಿತರಣೆ

ಕಲಬುರಗಿ : ಸಾಮಾಜಿಕ ಜಾಲತಾಣಗಳ (Social Media) ಮೂಲಕ ಸಾರ್ವಜನಿಕರಲ್ಲಿ ಸೈಬರ್ ಅಪರಾಧ ತಡೆ, ಸಂಚಾರ ನಿಯಮಗಳ ಪಾಲನೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಕುರಿತು ಅತ್ಯಂತ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿದ ಪೊಲೀಸ್ ಸಿಬ್ಬಂದಿಯವರ ಕಾರ್ಯವನ್ನು ಕಲಬುರಗಿ ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾದ (DCP) ಮಾನ್ಯ ಶ್ರೀಮತಿ ಶಾಲೂ., ಐಪಿಎಸ್ ರವರು ಮುಕ್ತಕಂಠದಿಂದ ಶ್ಲಾಘಿಸಿ, ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸೈಬರ್ ವಂಚನೆಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರುವಂತೆ ಮಾಡುವುದು, ರಸ್ತೆ ಸುರಕ್ಷತೆಗಾಗಿ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪ್ರೇರೇಪಿಸುವುದು ಹಾಗೂ ಸಮಾಜದಲ್ಲಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಈ ಸಿಬ್ಬಂದಿಯವರು ವಿಶೇಷ ಆಸಕ್ತಿ ವಹಿಸಿದ್ದರು. ಸಾರ್ವಜನಿಕರಿಗೆ ಸುಲಭವಾಗಿ ಅರ್ಥವಾಗುವಂತಹ ಹಾಗೂ ಆಕರ್ಷಕವಾದ ಜಾಗೃತಿ ವಿಡಿಯೋಗಳನ್ನು ಸಿದ್ಧಪಡಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ಯಶಸ್ವಿಯಾಗಿ ತಲುಪಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಸಿಬ್ಬಂದಿಯವರ ಈ ವಿನೂತನ ಹಾಗೂ ಜನಪರ ಕಾರ್ಯವೈಖರಿಯನ್ನು ಗುರುತಿಸಿದ ಡಿಸಿಪಿ ಶ್ರೀಮತಿ ಶಾಲೂ ಅವರು, ಕಚೇರಿಯಲ್ಲಿ ಸಿಬ್ಬಂದಿಯವರನ್ನು ಭೇಟಿ ಮಾಡಿ ಅಭಿನಂದಿಸಿದರು. ತಂತ್ರಜ್ಞಾನದ ಯುಗದಲ್ಲಿ ಸಾರ್ವಜನಿಕರನ್ನು ತಲುಪಲು ಇಂತಹ ಸೃಜನಶೀಲ ಪ್ರಯತ್ನಗಳು ಅತ್ಯಂತ ಅಗತ್ಯವಾಗಿದ್ದು, ಇಲಾಖೆಯ ಗೌರವವನ್ನು ಹೆಚ್ಚಿಸುವಲ್ಲಿ ಮತ್ತು ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಇಂತಹ ಜಾಗೃತಿ ವಿಡಿಯೋಗಳು ಸಹಕಾರಿಯಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಈ ಪ್ರೋತ್ಸಾಹಕ್ಕೆ ಸಿಬ್ಬಂದಿ ವರ್ಗದವರು ಧನ್ಯವಾದ ಅರ್ಪಿಸಿದ್ದು, ಮುಂದಿನ ದಿನಗಳಲ್ಲೂ ಇನ್ನು ಹೆಚ್ಚಿನ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.



