ರಾಜ್ಯ ಸುದ್ದಿಕ್ರೈಂ ಸುದ್ದಿಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕು

ಕುಡಿದು ಗಲಾಟೆ ಮಾಡುತ್ತಿದ್ದ ತಂದೆಯನ್ನೇ ಕೊಂದ ಮಗ ಮತ್ತು ಅಳಿಯ; ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಂದ ಆರೋಪಿಗಳ ಬಂಧನ

Share News

ಬೆಂಗಳೂರು: ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ತಂದೆಯನ್ನು ಸ್ವಂತ ಮಗ ಹಾಗೂ ಅಳಿಯ ಸೇರಿ ಹಗ್ಗದಿಂದ ಕುತ್ತಿಗೆ ಬಿಗಿದು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಈ ನಿಗೂಢ ಕೊಲೆ ಪ್ರಕರಣವನ್ನು ಅತ್ಯಂತ ಚುರುಕಾಗಿ ಭೇದಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ಮೃತರ ಮಗ ಹಾಗೂ ಅಳಿಯನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಮೂಲತಃ ತಮಿಳುನಾಡು ಮೂಲದವರಾಗಿದ್ದು ಪ್ರಸ್ತುತ ಬೊಮ್ಮನಹಳ್ಳಿಯಲ್ಲಿ ವಾಸವಿದ್ದ ಸೈಯದ್ ಶಾರುಕ್ (ಮಗ) ಹಾಗೂ ಶಹ್ನಿಶಾ (ಅಳಿಯ) ಬಂಧಿತ ಆರೋಪಿಗಳು. ಇವರಿಂದ ಕೊಲೆಯಾದ ದುರ್ದೈವಿಯನ್ನು ರಫೀಕ್ (೪೮) ಎಂದು ಗುರುತಿಸಲಾಗಿದೆ.

ಆರೋಪಿಗಳು ಜುಲೈ ೪ ರಂದು ರಫೀಕ್ ಅವರನ್ನು ಕೊಲೆ ಮಾಡಿ, ಬೇಗೂರು ವ್ಯಾಪ್ತಿಯ ವಿಟ್ಟಸಂದ್ರ ಗ್ರಾಮದ ನೀಲಿಗಿರಿ ತೋಪಿನಲ್ಲಿ ಶವವನ್ನು ಎಸೆದು ಪರಾರಿಯಾಗಿದ್ದರು. ಸ್ಥಳೀಯರು ನೀಡಿದ ಸುಳಿವಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸಮಗ್ರ ಕಾರ್ಯಾಚರಣೆ ನಡೆಸಿ ಇಬ್ಬರೂ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

ಬಂಧಿತರ ಪೈಕಿ ಅಳಿಯ ಶಹ್ನಿಶಾ ಶಾಲಾ ಬಸ್ ಚಾಲಕನಾಗಿದ್ದು, ಸಂಜೆ ವೇಳೆ ಆಟೋ ಓಡಿಸುತ್ತಿದ್ದನು. ಇನ್ನು ಮಗ ಸೈಯದ್ ಶಾರುಕ್ ಬೈಕ್ ಟ್ಯಾಕ್ಸಿ ಚಾಲಕನಾಗಿದ್ದನು. ಮೃತರಾದ ರಫೀಕ್ ತೀವ್ರ ಕುಡಿತದ ಚಟಕ್ಕೆ ಬಿದ್ದಿದ್ದು, ಆಗಾಗ ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಇವರೊಂದಿಗೆ ಇರುತ್ತಿದ್ದನು. ಜುಲೈ ೪ ರಂದು ಎಂದಿನಂತೆ ವಿಪರೀತ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ರಫೀಕ್, ಕುಟುಂಬಸ್ಥರೊಂದಿಗೆ ತೀವ್ರ ಗಲಾಟೆ ಮಾಡಿದ್ದಾನೆ. ಈ ವೇಳೆ ಜಗಳ ತಾರಕಕ್ಕೇರಿದ್ದು, ಮಗ ಮತ್ತು ಅಳಿಯ ಸೇರಿ ರಫೀಕ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.

ಹಲ್ಲೆಯ ಬಳಿಕ ಅರೆಪ್ರಜ್ಞಾವಸ್ಥೆಯಲ್ಲಿದ್ದ ರಫೀಕ್ ಅವರನ್ನು ಶಹ್ನಿಶಾ ತನಗಿದ್ದ ಆಟೋದಲ್ಲಿ ಕೂರಿಸಿಕೊಂಡು ಬೇಗೂರು ಕಡೆಗೆ ಕರೆದೊಯ್ದಿದ್ದಾರೆ. ದಾರಿಯ ಮಧ್ಯೆ ಸಿಂಗಸಂದ್ರ ಕೆರೆ ಸಮೀಪ ತಲುಪುತ್ತಿದ್ದಂತೆ ಇಬ್ಬರೂ ಸೇರಿ ಹಗ್ಗದಿಂದ ರಫೀಕ್ ಅವರ ಕುತ್ತಿಗೆಯನ್ನು ಬಲವಾಗಿ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ವಿಟ್ಲಸಂದ್ರದ ನೀಲಿಗಿರಿ ತೋಪಿನಲ್ಲಿ ಮೃತದೇಹವನ್ನು ಎಸೆದು ನಾಪತ್ತೆಯಾಗಿದ್ದರು.

​ಸದ್ಯ ಕೊಲೆ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಇಬ್ಬರನ್ನೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ (ಜೈಲಿಗೆ) ರವಾನಿಸಲಾಗಿದೆ.

 


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!