ಪ್ರಿಯಕರನಿಗಾಗಿ ಹೆತ್ತ ಮಗನ ಮೇಲೆಯೇ ಅಮಾನವೀಯ ಬ್ಲೇಡ್ ಹಲ್ಲೆ: ಪಾಪಿ ತಾಯಿ, ಪ್ರಿಯಕರನ ವಿರುದ್ಧ ಕೇಸ್ ದಾಖಲು

ಚಿತ್ತೂರು (ಆಂಧ್ರಪ್ರದೇಶ): ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಹೆತ್ತ ತಾಯಿಯೇ ತನ್ನ ಪ್ರಿಯಕರನೊಂದಿಗೆ ಸೇರಿ 7 ವರ್ಷದ ಮಗನ ಮೇಲೆ ಬ್ಲೇಡ್ನಿಂದ ಅಮಾನುಷವಾಗಿ ಹಲ್ಲೆ ನಡೆಸಿರುವ ಘೋರ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಿ. ಕೋಟಾ ಮಂಡಲ ಕೇಂದ್ರದಲ್ಲಿ ಬೆಳಕಿಗೆ ಬಂದಿದೆ.
ಬಾಲಕನ ತಂದೆ ಕೆಲವು ಸಮಯದ ಹಿಂದೆ ಮೃತಪಟ್ಟಿದ್ದರು. ಪತಿಯ ನಿಧನದ ಬಳಿಕ ಮಗನ ಭವಿಷ್ಯವನ್ನು ರೂಪಿಸಬೇಕಾಗಿದ್ದ ಇಂದ್ರಜಾ ಎಂಬ ಮಹಿಳೆ, ರಾಜು ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇವರಿಬ್ಬರ ಅನೈತಿಕ ಸಂಬಂಧಕ್ಕೆ ಏಳು ವರ್ಷದ ಅಮಾಯಕ ಬಾಲಕ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಇಬ್ಬರೂ ಸೇರಿ ಆತನ ಮೇಲೆ ಕ್ರೂರವಾಗಿ ದೌರ್ಜನ್ಯ ಎಸಗಿದ್ದಾರೆ.
ಆರೋಪಿಗಳಿಬ್ಬರು ರಾಕ್ಷಸರಂತೆ ವರ್ತಿಸಿದ್ದು, ಬಾಲಕನ ದೇಹದ ಖಾಸಗಿ ಭಾಗಗಳ ಮೇಲೆಯೂ ಬ್ಲೇಡ್ನಿಂದ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಲ್ಲೆಯ ತೀವ್ರತೆಗೆ ಬಾಲಕ ತಡೆಯಲಾರದೆ ಕಿರುಚಿಕೊಂಡಿದ್ದಾನೆ. ಮಗುವಿನ ಚೀರಾಟ ಕೇಳಿ ಸ್ಥಳೀಯ ನಿವಾಸಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದಾಗ ಈ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಗಾಯಾಳು ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ವೈದ್ಯರು ತೀವ್ರ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಮಾಹಿತಿ ಕಲೆಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತಾಯಿ ಇಂದ್ರಜಾ ಹಾಗೂ ಆಕೆಯ ಪ್ರಿಯಕರ ರಾಜು ವಿರುದ್ಧ ವಿವಿಧ ಕಠಿಣ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಹೆತ್ತ ಮಗನ ಮೇಲೆಯೇ ನಡೆದಿರುವ ಈ ಅಮಾನವೀಯ ಕೃತ್ಯ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಮಕ್ಕಳ ರಕ್ಷಣೆಗಾಗಿ ಇರುವ ಕಾಯ್ದೆಗಳಡಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



