ನಡುರಸ್ತೆಯಲ್ಲಿ ಗನ್ ತೋರಿಸಿ ಕೂಲ್ ಡ್ರಿಂಕ್ಸ್ ಗಾಡಿ ರಾಬರಿ: ವಾಹನ ಚಾಲಕ ಸೇರಿ 6 ಮಂದಿ ವರ್ತೂರು ಪೊಲೀಸರ ಬಲೆಗೆ!

ಬೆಂಗಳೂರು: ರಾಜಧಾನಿಯ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಡತಿ ಬಳಿ ನಡುರಸ್ತೆಯಲ್ಲೇ ಕಂಟ್ರಿಮೇಡ್ ಪಿಸ್ತೂಲ್ ತೋರಿಸಿ ದರೋಡೆ (ರಾಬರಿ) ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ, ವರ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ವಾಹನದ ಚಾಲಕ ಸೇರಿ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ಶನಿವಾರ ರಾತ್ರಿ ಸುಮಾರು 7 ಗಂಟೆಯ ಸಮಯದಲ್ಲಿ ಕೊಡತಿ ಬಳಿ ಕೂಲ್ ಡ್ರಿಂಕ್ಸ್ ಸರಬರಾಜು ಮಾಡುತ್ತಿದ್ದ 407 ಲಾರಿಯನ್ನು ಅಡ್ಡಗಟ್ಟಿದ ಆರೋಪಿಗಳು ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿ ಹಣ ದೋಚಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಲಾರಿಯ ಚಾಲಕ ಅಜಯ್ ಕುಮಾರ್ ಎಂಬಾತನೇ ಈ ಇಡೀ ದರೋಡೆಯ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದು ಬೆಳಕಿಗೆ ಬಂದಿದೆ.
ದಿನವಿಡೀ ನಗರದಲ್ಲಿ ಕೂಲ್ ಡ್ರಿಂಕ್ಸ್ ಡೆಲಿವರಿ ಮುಗಿಸಿ ಹಿಂತಿರುಗುವಾಗ ಲಾರಿಯಲ್ಲಿ ಲಕ್ಷಾಂತರ ರೂಪಾಯಿ ನಗದು ಸಂಗ್ರಹವಾಗಿರುತ್ತದೆ ಎಂದು ಭಾವಿಸಿದ್ದ ಚಾಲಕ ಅಜಯ್, ತನ್ನ ಸ್ನೇಹಿತರ ಜೊತೆ ಸೇರಿ ಈ ಸ್ಕೆಚ್ ಹಾಕಿದ್ದ. ಲಾರಿಯನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಹಣ ದೋಚುವಂತೆ ತಿಳಿಸಿದ್ದ. ಆದರೆ, ಅಂದು ಕೇವಲ ₹16,000 ನಗದು ಮಾತ್ರ ಸಂಗ್ರಹವಾಗಿತ್ತು. ಚಾಕು ತರಲು ಹೇಳಿದ್ದರೂ, ಆಕಾಶ್ ಹಾಗೂ ಇನ್ನೋರ್ವ ಆರೋಪಿ ರೋಹಿತ್ ಎಂಬಾತನಿಂದ ಬಿಹಾರದಿಂದ ತರಿಸಲಾಗಿದ್ದ ಕಂಟ್ರಿಮೇಡ್ ಪಿಸ್ತೂಲ್ ತಂದು ಬೆದರಿಸಿದ್ದರು. ಲಾರಿಯಲ್ಲಿದ್ದವರು ಭಯದಿಂದ ಹಣ ಕೊಡುವಾಗ, ಚಾಲಕ ಅಜಯ್ ತನಗೇನೂ ತಿಳಿಯದಂತೆ ನಾಟಕ ಆಡಿದ್ದ.
ಘಟನೆ ನಡೆದ ತಕ್ಷಣವೇ ಸಕ್ರಿಯರಾದ ವರ್ತೂರು ಪೊಲೀಸ್ ತಂಡ, ಕೇವಲ ಎರಡು ದಿನಗಳಲ್ಲಿ ಬರೋಬ್ಬರಿ 350ಕ್ಕೂ ಹೆಚ್ಚು ಸಿಸಿಟಿವಿ ಕೆಮರಾಗಳ ದೃಶ್ಯಾವಳಿಗಳನ್ನು ತೀವ್ರವಾಗಿ ಪರಿಶೀಲಿಸಿ ಆರೋಪಿಗಳನ್ನು ಪತ್ತೆಹಚ್ಚಿದೆ.
ಬಂಧಿತ ಆರು ಮಂದಿ ಆರೋಪಿಗಳಲ್ಲಿ ಓರ್ವ ಅಪ್ರಾಪ್ತನೂ ಸೇರಿದ್ದು, ಇವರಿಂದ ಕಂಟ್ರಿಮೇಡ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.



