ಉಡುಪಿ: ಸ್ಥಳೀಯರನ್ನೇ ಕೃಷ್ಣ ದರ್ಶನದಿಂದ ದೂರ ಮಾಡುತ್ತಿರುವ ಪರ್ಯಾಯ ಮಠ – ‘ನಮ್ಮ ಕರ್ನಾಟಕ ಸೇನೆ’ ಆಕ್ರೋಶ, ಹೋರಾಟದ ಎಚ್ಚರಿಕೆ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಜಾರಿಯಲ್ಲಿರುವ ಹೊಸ ವ್ಯವಸ್ಥೆಗಳಿಂದಾಗಿ ಸ್ಥಳೀಯ ಭಕ್ತರೇ ಕೃಷ್ಣನ ದರ್ಶನದಿಂದ ವಂಚಿತರಾಗುತ್ತಿದ್ದಾರೆ. ಹಣ ಕೊಟ್ಟು ದರ್ಶನ ಪಡೆಯುವ ಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ಬೇಸರ ತಂದಿದೆ ಎಂದು ‘ನಮ್ಮ ಕರ್ನಾಟಕ ಸೇನೆ’ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸುಜಯ್ ಪೂಜಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೀರೂರು ಪರ್ಯಾಯದ ಸಂದರ್ಭದಲ್ಲಿ “ನಮ್ಮ ಪರ್ಯಾಯ” ಎಂದು ಹಳ್ಳಿ ಹಳ್ಳಿಗಳಿಂದ ಭಕ್ತರು ಶ್ರೀ ಕೃಷ್ಣನ ಅನುಗ್ರಹಕ್ಕಾಗಿ ಹೊರೆಕಾಣಿಕೆ ನೀಡಿ, ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದರು. ಆದರೆ ಪರ್ಯಾಯ ಮುಗಿದ ಬಳಿಕ ಮಠದಲ್ಲಿ ಜಾರಿಯಾದ ಅತಿಯಾದ ನಿಯಮಗಳು ಮತ್ತು ‘ಸರ್ವಾಧಿಕಾರಿ ಧೋರಣೆ’ ಸ್ಥಳೀಯರನ್ನು ಕೃಷ್ಣನಿಂದ ದೂರ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಮುಖ ಆರೋಪಗಳು ಮತ್ತು ಮನವಿ:
ಸ್ಥಳೀಯರಿಗೆ ಸಿಗದ ಗೌರವ: ಹಿಂದೆ ಸ್ಥಳೀಯರೆಂದು ತಿಳಿಸಿದರೆ ನೇರ ದರ್ಶನಕ್ಕೆ ಅವಕಾಶವಿತ್ತು. ಆದರೆ ಈಗ ಹಣ ಪಾವತಿಸದೆ ದರ್ಶನ ಸಿಗದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಸ್ಥಳೀಯ ಭಕ್ತರು ಕೃಷ್ಣ ದರ್ಶನ ಸಿಗದೆ, ಭಕ್ತಿಯಿಂದ ಕನಕನ ಕಿಂಡಿಯಲ್ಲಿ ನೋಡಿ ಬಳಿಕ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಕೈಮುಗಿದು ಭಾರವಾದ ಹೃದಯದಿಂದ ವಾಪಸಾಗುತ್ತಿದ್ದಾರೆ.
ಹೊರೆಕಾಣಿಕೆ ನೀಡಿದವರಿಗೂ ನಿರಾಸೆ: ಕಷ್ಟಪಟ್ಟು ಹೊರೆಕಾಣಿಕೆ ನೀಡಿದ ಹಳ್ಳಿಯ ಭಕ್ತರಿಗೆ ತಿಂಗಳಿಗೆ ಒಮ್ಮೆಯಾದರೂ ದೇವರ ದರ್ಶನ ಸಿಗುತ್ತಿಲ್ಲ. ಮಠದ ಈ ನಡೆ ಹೀಗೆಯೇ ಮುಂದುವರಿದರೆ ಮುಂದಿನ ಪರ್ಯಾಯಗಳಲ್ಲಿ ಸ್ಥಳೀಯರು ಮತ್ತು ಹಳ್ಳಿಯ ಭಕ್ತರು ಭಾಗವಹಿಸುವುದು ಅನುಮಾನ.
ವಿಶೇಷ ವ್ಯವಸ್ಥೆಗೆ ಆಗ್ರಹ: ಪರ್ಯಾಯ ಸಮಯದಲ್ಲಿ ಸೇವೆ ಸಲ್ಲಿಸಿದ ಹಾಗೂ ಹೊರೆಕಾಣಿಕೆ ನೀಡಿದ ದಾಖಲೆ ಅಥವಾ ಪತ್ರ ತೋರಿಸುವ ಸ್ಥಳೀಯ ಭಕ್ತರಿಗೆ ಉಚಿತವಾಗಿ ದರ್ಶನ ಪಡೆಯಲು ಮಠದ ವ್ಯವಸ್ಥಾಪಕರು ಮತ್ತು ಪರ್ಯಾಯ ಸಮಿತಿ ತಕ್ಷಣ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
ಸ್ಥಳೀಯ ಭಕ್ತರ ಈ ಧ್ವನಿಗೆ ಮಠದ ಆಡಳಿತ ಮಂಡಳಿ ಸೂಕ್ತವಾಗಿ ಸ್ಪಂದಿಸದಿದ್ದರೆ, ‘ನಮ್ಮ ಕರ್ನಾಟಕ ಸೇನೆ’ಯ ಜಿಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ಥಳೀಯರೊಂದಿಗೆಗೂಡಿ ಉಗ್ರ ಹೋರಾಟ ರೂಪಿಸುವುದಾಗಿ ಸುಜಯ್ ಪೂಜಾರಿ ಎಚ್ಚರಿಸಿದ್ದಾರೆ.



