ರಾಜ್ಯ ಸರ್ಕಾರ ದಿವಾಳಿ: ಬಡವರ ಬಿಪಿಎಲ್ ಕಾರ್ಡ್ ಹಾಗೂ ವಿವಿಧ ವೇತನಗಳ ರದ್ದತಿಗೆ ಪ್ರದೀಪ್ ಗಬಡಿ ಆಕ್ರೋಶ

ತೀರ್ಥಹಳ್ಳಿ: ರಾಜ್ಯ ಸರ್ಕಾರವು ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ದಿವಾಳಿಯಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಲಾಗದೆ ಬಡವರ ಹಿತಾಸಕ್ತಿಗಳನ್ನು ಬಲಿಕೊಡುತ್ತಿದೆ ಎಂದು ತೀರ್ಥಹಳ್ಳಿ ಯುವ ಮೋರ್ಚಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪ್ರದೀಪ್ ಗಬಡಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ವಿವಿಧ ಸರ್ಕಾರಗಳು ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನು ನಿಧಾನವಾಗಿ ನಿಲ್ಲಿಸಲು ಸರ್ಕಾರ ಸಂಚು ರೂಪಿಸಿದೆ ಎಂದು ಆರೋಪಿಸಿರುವ ಅವರು, ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸುವ ನೆಪದಲ್ಲಿ ಬಡವರ ಸೌಲಭ್ಯಗಳಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ತಾಲ್ಲೂಕಿನಾದ್ಯಂತ ಸಾವಿರಾರು ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸದೆ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂದ್ಯಾ ಸುರಕ್ಷಾ, ವಿಧವಾ ವೇತನ ಹಾಗೂ ಅಂಗವಿಕಲ ವೇತನಗಳನ್ನು ಮನಬಂದಂತೆ ರದ್ದುಗೊಳಿಸಲಾಗಿದೆ. ಇದರಿಂದಾಗಿ ಸಮಾಜದ ಅತ್ಯಂತ ನೊಂದ ವರ್ಗದ ಕುಟುಂಬಗಳು ಆರ್ಥಿಕ ತೊಳಲಾಟಕ್ಕೆ ಸಿಲುಕಿವೆ ಎಂದು ಅವರು ವಿಷಾದಿಸಿದ್ದಾರೆ.
ಆರೋಗ್ಯ, ಮಕ್ಕಳ ಶಿಕ್ಷಣ ಹಾಗೂ ಮನೆ ನಿರ್ಮಾಣಕ್ಕಾಗಿ ಬಡವರು ಮಾಡಿರುವ ಬ್ಯಾಂಕ್ ಸಾಲದ ವರದಿಗಳನ್ನು ಮುಂದಿಟ್ಟುಕೊಂಡು ಸರ್ಕಾರವು ಅವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುತ್ತಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ವೆಚ್ಚದ ಆರೋಗ್ಯ ಸೇವೆಯನ್ನು ಪಡೆಯಲಾಗದೆ ಬಡ ಕುಟುಂಬಗಳು ಕಂಗಾಲಾಗಿವೆ. ಪ್ರತಿದಿನ ಸಾವಿರಾರು ಜನರು ತಾಲ್ಲೂಕು ಕಚೇರಿಗೆ ಅಲೆದಾಡುತ್ತಿದ್ದರೂ ಆಡಳಿತಾರೂಢ ಸರ್ಕಾರ ಅವರ ಅಹವಾಲು ಆಲಿಸದಷ್ಟು ಕುರುಡಾಗಿದೆ ಎಂದು ಗಬಡಿ ಟೀಕಿಸಿದ್ದಾರೆ.
ಬಡವರ ಸೌಲತ್ತುಗಳನ್ನು ಕಿತ್ತುಕೊಳ್ಳುವ ಮೂಲಕ ಅವರನ್ನು ಮತ್ತಷ್ಟು ಬಡತನಕ್ಕೆ ತಳ್ಳುವ ಈ ದುಷ್ಟ ಕೃತ್ಯವನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು. ವಿಧವಾ ವೇತನ ಮತ್ತು ಅಂಗವಿಕಲ ವೇತನದಂತಹ ಕನಿಷ್ಠ ಸೇವೆಗಳನ್ನು ಕಡಿತಗೊಳಿಸದೆ, ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಪ್ರದೀಪ್ ಗಬಡಿ ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.



