ಜಿಲ್ಲಾ ಸುದ್ದಿಉಪಯುಕ್ತ ಮಾಹಿತಿಗಳುಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಶಹಾಪುರ ಸರ್ಕಾರಿ ಆಸ್ಪತ್ರೆಯ ‘5000 ಶಸ್ತ್ರಚಿಕಿತ್ಸೆ’ ಸಾಧನೆಗೆ ಇಲಾಖೆಯ ಶಂಕೆ: ಆಡಳಿತ ವೈದ್ಯಾಧಿಕಾರಿಗೆ ಶಿಸ್ತು ಕ್ರಮದ ಅಂತಿಮ ಎಚ್ಚರಿಕೆ!

Share News

ನಮ್ಮ ಕರ್ನಾಟಕ ಸೇನೆ ತಾಲ್ಲೂಕು ಅಧ್ಯಕ್ಷ ಸಿದ್ದು ಪಟ್ಟೇದಾರ್ ಆರೋಪದ ಬೆನ್ನಲ್ಲೇ ವರದಿ ಕೇಳಿದ ಡಿ.ಹೆಚ್.ಓ.

​ಶಹಾಪುರ: ಇಲ್ಲಿನ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 5000ಕ್ಕೂ ಹೆಚ್ಚು ಬೃಹತ್ ಶಸ್ತ್ರಚಿಕಿತ್ಸೆ ನಡೆಸಿ ರೋಗಿಗಳ ಜೀವ ಉಳಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯ ಸತ್ಯಾಸತ್ಯತೆಯ ಕುರಿತು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತೀವ್ರ ಶಂಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯಲ್ಲಪ್ಪ ಪಾಟೀಲ್ ಅವರಿಗೆ ಇಲಾಖೆಯು ಅಧಿಕೃತ ಜ್ಞಾಪನಾ ಪತ್ರದ ಮೂಲಕ ಶಿಸ್ತು ಕ್ರಮದ ಅಂತಿಮ ಎಚ್ಚರಿಕೆ ನೋಟಿಸ್ ಜಾರಿ ಮಾಡಿದೆ.

​ಸಿದ್ದು ಪಟ್ಟೇದಾರ್ ಅವರ ಗಂಭೀರ ಆರೋಪಗಳು:

ಸ್ಥಳೀಯ ದಿನಪತ್ರಿಕೆ ಹಾಗೂ ಆನ್‌ಲೈನ್ ಮಾಧ್ಯಮಗಳಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಯಲ್ಲಪ್ಪ ಪಾಟೀಲ್ ಅವರು ಕಠಿಣ ಪರಿಸ್ಥಿತಿಯಲ್ಲೂ 5000ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಬಡವರ ಜೀವ ಉಳಿಸಿದ್ದಾರೆ, ಇವರು “ಬಡವರ ಪಾಲಿನ ಭರವಸೆಯ ವೈದ್ಯ” ಎಂದು ವಿಶೇಷ ವರದಿಗಳು ಪ್ರಕಟವಾಗಿದ್ದವು. ಈ ವರದಿಯ ಬೆನ್ನಲ್ಲೇ ನಮ್ಮ ಕರ್ನಾಟಕ ಸೇನೆಯ ಶಹಾಪುರ ತಾಲ್ಲೂಕು ಅಧ್ಯಕ್ಷರಾದ ಶ್ರೀ ಸಿದ್ದು ಪಟ್ಟೇದಾರ್ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಅಧಿಕೃತ ದೂರು ನೀಡಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

​”ಶಹಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಕನಿಷ್ಠ ಮೂಲಸೌಕರ್ಯಗಳೂ ಇಲ್ಲದೆ ಸಾಮಾನ್ಯ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಆಸ್ಪತ್ರೆಯ ನೈಜ ಸ್ಥಿತಿಯನ್ನು ನೋಡಿದರೆ ರೋಗಿಗಳಿಗೆ ನರಕ ದರ್ಶನವಾಗುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಗತ್ಯ ತಜ್ಞ ವೈದ್ಯರು ಹಾಗೂ ಆಧುನಿಕ ವ್ಯವಸ್ಥೆಗಳಿಲ್ಲದೆ ಇಷ್ಟೊಂದು ಬೃಹತ್ ಸಂಖ್ಯೆಯ ಶಸ್ತ್ರಚಿಕಿತ್ಸೆ ನಡೆಸಲು ಹೇಗೆ ಸಾಧ್ಯ? ಕೇವಲ ವೈಯಕ್ತಿಕ ಪ್ರಚಾರಕ್ಕಾಗಿ ಸಣ್ಣಪುಟ್ಟ ಚಿಕಿತ್ಸೆಗಳನ್ನೇ ದೊಡ್ಡದಾಗಿ ಬಿಂಬಿಸಿ, ಬಡವರ ಹೆಸರಿನಲ್ಲಿ ಇಲಾಖೆ ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸಲಾಗುತ್ತಿದೆ. ಆದ್ದರಿಂದ ಈ 5000 ರೋಗಿಗಳಿಗೆ ಯಾವ ಯಾವ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂಬ ಸಂಪೂರ್ಣ ಅಂಕಿ-ಅಂಶಗಳನ್ನು ಬಹಿರಂಗಪಡಿಸಬೇಕು” ಎಂದು ಸಿದ್ದು ಪಟ್ಟೇದಾರ್ ಕಟುವಾಗಿ ಒತ್ತಾಯಿಸಿದ್ದಾರೆ.

​ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು, 2021 ರ ಪ್ರಕಾರ ಯಾವುದೇ ಸರ್ಕಾರಿ ಅಧಿಕಾರಿ ಅಥವಾ ವೈದ್ಯರು ಸರ್ಕಾರದ ಪೂರ್ವಾನುಮತಿ ಇಲ್ಲದೆ ಮಾಧ್ಯಮಗಳ ಮುಂದೆ ಹೋಗಿ ವೈಯಕ್ತಿಕ ಪ್ರಚಾರ ಪಡೆಯುವಂತಿಲ್ಲ ಹಾಗೂ ಸನ್ಮಾನ/ಬಿರುದುಗಳನ್ನು ಸ್ವೀಕರಿಸುವಂತಿಲ್ಲ. ಈ ನಿಯಮಗಳನ್ನು ಗಾಳಿಗೆ ತೂರಿ ವೈಯಕ್ತಿಕ ಬಿರುದುಗಳೊಂದಿಗೆ ಪ್ರಚಾರ ಪಡೆದಿರುವುದು ತಪ್ಪು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

​ಇಲಾಖೆಯ ಆದೇಶ ಉಲ್ಲಂಘನೆ – ಶಿಸ್ತು ಕ್ರಮದ ಎಚ್ಚರಿಕೆ:

ಸಿದ್ದು ಪಟ್ಟೇದಾರ್ ಅವರ ದೂರಿನ ಅನ್ವಯ ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯವು ಕಳೆದ ಆಗಸ್ಟ್ 1, 2026 ರಂದೇ ಅಧಿಕೃತ ಪತ್ರದ (ಸಂಖ್ಯೆ: ಸಿಬ್ಬಂದಿ-1/OS/2026-27/558) ಮೂಲಕ ಸ್ಪಷ್ಟೀಕರಣ ಹಾಗೂ ಶಸ್ತ್ರಚಿಕಿತ್ಸೆಗಳ ಅಂಕಿ-ಅಂಶಗಳ ವಿವರಣೆ ನೀಡುವಂತೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಸೂಚಿಸಿತ್ತು. ಆದರೆ ವೈದ್ಯಾಧಿಕಾರಿಗಳು ಇಲಾಖೆಯ ಆದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಯಾವುದೇ ಮಾಹಿತಿಯನ್ನು ಸಲ್ಲಿಸಿರಲಿಲ್ಲ.

​ಅಧಿಕಾರಿಯ ಈ ಬೇಜವಾಬ್ದಾರಿತನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಆರೋಗ್ಯಾಧಿಕಾರಿಗಳು, ಸೆಪ್ಟೆಂಬರ್ 7, 2026 ರಂದು ಮತ್ತೊಂದು ಕಟ್ಟುನಿಟ್ಟಿನ ಅಂತಿಮ ಕಾರಣ ಕೇಳಿ ನೋಟಿಸ್ (ಸಂಖ್ಯೆ: ಸಿಬ್ಬಂದಿ-1/105/2026-27/707) ಜಾರಿ ಮಾಡಿದ್ದಾರೆ. “ಪತ್ರ ತಲುಪಿದ ತಕ್ಷಣವೇ 5000 ಶಸ್ತ್ರಚಿಕಿತ್ಸೆಗಳ ಸಂಪೂರ್ಣ ವಿವರಣೆಯನ್ನು ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ಒಂದು ವೇಳೆ ಈ ಬಾರಿಯೂ ಮಾಹಿತಿ ನೀಡಲು ವಿಫಲರಾದರೆ, ಕರ್ತವ್ಯ ಲೋಪ ಹಾಗೂ ನಡತೆ ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಮತ್ತು ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ನೋಟಿಸ್‌ನಲ್ಲಿ ಕಟುವಾಗಿ ಎಚ್ಚರಿಸಲಾಗಿದೆ.

​ನಮ್ಮ ಕರ್ನಾಟಕ ಸೇನೆ ತಾಲ್ಲೂಕು ಅಧ್ಯಕ್ಷರ ದೂರು ಮತ್ತು ಇಲಾಖೆಯ ಅಂತಿಮ ನೋಟಿಸ್ ಈಗ ಜಿಲ್ಲೆಯ ವೈದ್ಯಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!