ಭೀಕರ ಅಪಘಾತ: ಕಾರು – ಬೈಕ್ ಮುಖಾಮುಖಿ ಡಿಕ್ಕಿ; ಮೂವರು ಯುವಕರ ದಾರುಣ ಸಾವು

ಹನೂರು: ಪಟ್ಟಣದ ಹೊರವಲಯದ ಹುಲಸುಗುಡ್ಡೆ ಬಳಿ ಅಪರಿಚಿತ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ತಾಲ್ಲೂಕಿನ ಕೊಪ್ಪ ಗ್ರಾಮದ ನಿವಾಸಿಗಳಾದ ಮಹೇಂದ್ರ (35), ಸುರೇಶ್ (24) ಹಾಗೂ ಮುನಿಯಪ್ಪ (35) ಮೃತಪಟ್ಟ ದುರ್ದೈವಿಗಳು.
ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿದ್ದಾಗ ಸಂಭವಿಸಿದ ದುರಂತ:
ಮೃತಪಟ್ಟ ಮೂವರು ಯುವಕರು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಗಣಪತಿ ಮೂರ್ತಿ ತರಲು ಕೊಳ್ಳೇಗಾಲದಲ್ಲಿದ್ದ ತಮ್ಮ ಸ್ನೇಹಿತರ ಬಳಿ ಚಂದಾ (ದಣಿಕೆ) ಹಣ ಸಂಗ್ರಹಿಸಿ, ದ್ವಿಚಕ್ರ ವಾಹನದಲ್ಲಿ ಕೊಳ್ಳೇಗಾಲಕ್ಕೆ ತೆರಳುತ್ತಿದ್ದರು. ಈ ವೇಳೆ ಹನೂರು ಹೊರವಲಯದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಮೀಪ, ಮೈಸೂರಿನಿಂದ ಮಲೆಮಹದೇಶ್ವರ ಬೆಟ್ಟದ ಕಡೆಗೆ ಅತಿ ವೇಗವಾಗಿ ಸಾಗುತ್ತಿದ್ದ ಅಪರಿಚಿತ ಕಾರು ಬೈಕ್ಗೆ ನೇರವಾಗಿ ಡಿಕ್ಕಿ ಹೊಡೆದಿದೆ.
ಸ್ಥಳದಲ್ಲೇ ಇಬ್ಬರು ಸಾವು, ಆಸ್ಪತ್ರೆಗೆ ಒಯ್ಯುವಾಗ ಮತ್ತೊಬ್ಬ ಮೃತ್ಯು:
ಅಪಘಾತದ ತೀವ್ರತೆಗೆ ಇಬ್ಬರು ಯುವಕರು ಸ್ಥಳದಲ್ಲೇ ಕೊನೆಯುಸಿರೆಳೆದರೆ, ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಹಬ್ಬದ ದಿನವೇ ಗ್ರಾಮದ ಮೂವರು ಯುವಕರು ದುರಂತವಾಗಿ ಮೃತಪಟ್ಟಿರುವುದು ಕೊಪ್ಪ ಗ್ರಾಮದಲ್ಲಿ ಶೋಕಸಾಗರ ತಂದಿಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪಘಾತ ಎಸಗಿ ಪರಾರಿಯಾಗಿರುವ ಕಾರು ಮತ್ತು ಚಾಲಕನಿಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
- ಶಾರುಕ್ ಖಾನ್, ಹನೂರು



