ಸಾಗರ: ಮನೆಯ ಹಿಂಭಾಗದಲ್ಲೇ ಗಾಂಜಾ ತೋಟ — ಪೊಲೀಸರ ದಿಢೀರ್ ದಾಳಿ, ₹2.10 ಲಕ್ಷ ಮೌಲ್ಯದ ಹಸಿ ಗಾಂಜಾ ಜಪ್ತಿ!

ಸಾಗರ: ಅಕ್ರಮ ಮಾದಕ ವಸ್ತುಗಳ ವಿರುದ್ಧ ಕಟ್ಟುನಿಟ್ಟಿನ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು, ತಾಲೂಕಿನ ಆನಂದಪುರ ಸಮೀಪದ ಗೌತಮಪುರ ಗ್ರಾಮದಲ್ಲಿ ಮನೆಯ ಹಿಂಭಾಗದಲ್ಲೇ ಬೆಳೆದಿದ್ದ ಬೃಹತ್ ಗಾಂಜಾ ತೋಟದ ಮೇಲೆ ದಾಳಿ ನಡೆಸಿ, ಕೋಟ್ಯಂತರ ಮೌಲ್ಯದ ಗಾಂಜಾ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.
ಗೌತಮಪುರ ಗ್ರಾಮದ ನಿವಾಸಿಗಳಾದ ಬಸವರಾಜ್ ಹಾಗೂ ಕುಮಾರ ಪ್ರಕರಣದ ಮುಖ್ಯ ಆರೋಪಿಗಳಾಗಿದ್ದು, ದಾಳಿ ವೇಳೆ ಬಸವರಾಜ್ ಎಂಬುವವರನ್ನು ಪೊಲೀಸರು ಮಾಲು ಸಹಿತ ವಶಕ್ಕೆ ಪಡೆದಿದ್ದಾರೆ.
₹2.10 ಲಕ್ಷ ಮೌಲ್ಯದ 16.4 ಕೆ.ಜಿ. ಹಸಿ ಗಾಂಜಾ ಜಪ್ತಿ:
ಗೌತಮಪುರದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇಲಾಧಿಕಾರಿಗಳಿಗೆ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ತಂಡ, ಆರೋಪಿಗಳ ಮನೆಯ ಹಿಂಭಾಗದ ತೋಟದ ಮೇಲೆ ದಿಢೀರ್ ದಾಳಿ ನಡೆಸಿದೆ. ಪರಿಶೀಲನೆ ವೇಳೆ ತೋಟದಲ್ಲಿ ಅಕ್ರಮವಾಗಿ ಬೆಳೆಸಲಾಗಿದ್ದ ಸುಮಾರು ₹2.10 ಲಕ್ಷ ಮೌಲ್ಯದ, 16,400 ಗ್ರಾಂ (16.4 ಕೆ.ಜಿ.) ತೂಕದ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ:
ಸಹಾಯಕ ಪೊಲೀಸ್ ಅಧೀಕ್ಷಕ ಬೆನಕ ಪ್ರಸಾದ್ ಅವರ ಸೂಕ್ತ ಮಾರ್ಗದರ್ಶನದಲ್ಲಿ ಸಾಗರ ವೃತ್ತ ಪೊಲೀಸ್ ನಿರೀಕ್ಷಕ ಸಂತೋಷ್ ಶೆಟ್ಟಿ ನೇತೃತ್ವ ವಹಿಸಿದ್ದರು. ತಂಡದಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಪ್ರವೀಣ್, ಎಎಸ್ಐ ಹಾಲಪ್ಪ ಹಾಗೂ ಸಿಬ್ಬಂದಿಗಳಾದ ಪರಶುರಾಮ್, ಪ್ರಶಾಂತ್, ನಿರಂಜನ್, ನೂತನ್ ಸಂತೋಷ್, ಐ.ಟಿ. ಸಂತೋಷ್, ಸುನಿಲ್ ಮತ್ತು ಅಭಿಷೇಕ್ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಸಾಗರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.



