ರಾಣೇಬೆನ್ನೂರು ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಕೆಆರ್ಎಸ್ ಪಕ್ಷ ಆಗ್ರಹ

ರಾಣೇಬೆನ್ನೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಕ್ಷಣವೇ ತಡೆಗಟ್ಟಬೇಕು ಹಾಗೂ ಪರವಾನಗಿ ಪಡೆದ ಬಾರ್ಗಳಲ್ಲಿ ಅಬಕಾರಿ ನಿಯಮಗಳ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೆಆರ್ಎಸ್ (ಕರ್ನಾಟಕ ರಾಷ್ಟ್ರ ಸಮಿತಿ) ಪಕ್ಷದ ತಾಲೂಕು ಸಮಿತಿ ವತಿಯಿಂದ ಅಬಕಾರಿ ಇಲಾಖೆಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೆಆರ್ಎಸ್ ಪಕ್ಷದ ತಾಲೂಕು ಅಧ್ಯಕ್ಷ ಹನುಮಂತ ದುಗತ್ತಿ ಅವರ ನೇತೃತ್ವದಲ್ಲಿ ಅಧಿಕಾರಿಗಳನ್ನು ಭೇಟಿಯಾದ ನಿಯೋಗವು, ತಾಲೂಕಿನ ಸಣ್ಣಪುಟ್ಟ ಕಿರಾಣಿ ಹಾಗೂ ಬೀಡಿ ಅಂಗಡಿಗಳಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರು ನೀಡಿತು. ಅಲ್ಲದೆ, ಕೆಲವು ಗ್ರಾಮಗಳಲ್ಲಿ ಮದ್ಯ ಮಾರಾಟದ ಸ್ಥಳಗಳನ್ನು ಅನಧಿಕೃತವಾಗಿ ‘ಹರಾಜು’ ಹಾಕಲಾಗುತ್ತಿರುವ ಗಂಭೀರ ಆರೋಪ ಕೇಳಿಬರುತ್ತಿದ್ದು, ಈ ಕುರಿತು ತಕ್ಷಣ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿತು.
ನಿಯಮ ಉಲ್ಲಂಘಿಸುವ ಬಾರ್ಗಳ ಮೇಲೆ ನಿಗಾಕ್ಕೆ ಆಗ್ರಹ:
ಸಿಎಲ್-4 ಸೇರಿದಂತೆ ಲೈಸೆನ್ಸ್ ಹೊಂದಿರುವ ಮದ್ಯದಂಗಡಿ ಹಾಗೂ ಬಾರ್ಗಳಲ್ಲಿ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂದು ಅಧಿಕಾರಿಗಳು ನಿಯಮಿತವಾಗಿ ತಪಾಸಣೆ ನಡೆಸಬೇಕು. ಕೆಲವು ಬಾರ್ಗಳು ಬೆಳಗಿನ ಜಾವ 6.30ಕ್ಕೇ ಬಾಗಿಲು ತೆಗೆದು ವ್ಯಾಪಾರ ಮಾಡುತ್ತಿರುವ ದೂರುಗಳಿದ್ದು, ಇವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಕ್ರಮ ಮದ್ಯದಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸಾಮಾಜಿಕ ಹಾಗೂ ಆರ್ಥಿಕವಾಗಿ ಬೀದಿಗೆ ಬೀಳುತ್ತಿದ್ದು, ಮಹಿಳೆಯರು ನೀಡುವ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಇಲಾಖೆಯು ಅಕ್ರಮ ಮದ್ಯ ಮಾರಾಟಕ್ಕೆ ತಡೆ ನೀಡದಿದ್ದಲ್ಲಿ ಅಬಕಾರಿ ಕಚೇರಿಯ ಎದುರು ನಿರಂತರ ಹೋರಾಟ ರೂಪಿಸುವುದಾಗಿ ಹನುಮಂತ ದುಗತ್ತಿ ಎಚ್ಚರಿಸಿದರು. ಮನವಿ ಸಲ್ಲಿಕೆ ವೇಳೆ ಹಾವೇರಿ ಜಿಲ್ಲಾಧ್ಯಕ್ಷ ಧರ್ಮರಾಜ್ ಬಿಂದಲಗಿ, ಜಿಲ್ಲಾ ಉಪಾಧ್ಯಕ್ಷ ಧರ್ಮಣ್ಣ ಉಪ್ಪಾರ, ಗುಡ್ಡಪ್ಪ, ಶಬ್ಬೀರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.



