ಮೈಸೂರು: ಕಾರಿನ ಬ್ಯಾನೆಟ್ ಮೇಲಿದ್ದರೂ 800 ಮೀಟರ್ ಎಳೆದೊಯ್ದು ಕೊಲೆ ಯತ್ನ; ಆರೋಪಿಗೆ 10 ವರ್ಷ ಜೈಲು, ₹50 ಸಾವಿರ ದಂಡ

ಮೈಸೂರು: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾರು ಚಲಾಯಿಸಿ, ಬ್ಯಾನೆಟ್ ಮೇಲೆ ಬಿದ್ದಿದ್ದರೂ ಲೆಕ್ಕಿಸದೆ ಕೊಲೆಗೆ ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹50,000 ದಂಡ ವಿಧಿಸಿ ಮೈಸೂರು ನ್ಯಾಯಾಲಯ ತೀರ್ಪು ನೀಡಿದೆ.
ಬಾಬು ಥಾಮಸ್ ಶಿಕ್ಷೆಗೆ ಗುರಿಯಾದ ಅಪರಾಧಿ. ದಂಡ ತೆರಲು ತಪ್ಪಿದ್ದಲ್ಲಿ ಹೆಚ್ಚುವರಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಪ್ರಕರಣದ ಹಿನ್ನೆಲೆ:
2022ರಲ್ಲಿ ಮೈಸೂರಿನ ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಎಂಬುವವರ ಮೇಲೆ ಬಾಬು ಥಾಮಸ್ ಹಲ್ಲೆ ನಡೆಸಿ, ಬಳಿಕ ಕಾರಿನಿಂದ ಗುದ್ದಿದ್ದ. ಕಾರು ಡಿಕ್ಕಿಯಾದ ರಭಸಕ್ಕೆ ಚಂದ್ರಶೇಖರ್ ಕಾರಿನ ಬ್ಯಾನೆಟ್ ಮೇಲೆ ಬಿದ್ದಿದ್ದರು. ಆದರೂ ಕಾರು ನಿಲ್ಲಿಸದ ಅಪರಾಧಿ, ಕೊಲೆ ಮಾಡುವ ದುರುದ್ದೇಶದಿಂದ ಬ್ಯಾನೆಟ್ ಮೇಲಿದ್ದ ಚಂದ್ರಶೇಖರ್ ಅವರನ್ನು ಅಪಾಯಕಾರಿಯಾಗಿ ಕಾರು ಚಾಲನೆ ಮಾಡಿಕೊಂಡು ಸುಮಾರು 800 ಮೀಟರ್ ದೂರದವರೆಗೆ ಎಳೆದೊಯ್ದು ಕೆಳಗೆ ಕೆಡವಿದ್ದ.
ಕಟ್ಟುನಿಟ್ಟಿನ ತನಿಖೆ, ಸಾಬೀತಾದ ಆರೋಪ:
ಘಟನೆ ಸಂಬಂಧ ಎನ್.ಆರ್. ಠಾಣೆಯ ಆಗಿನ ಸಬ್‌ಇನ್‌ಸ್ಪೆಕ್ಟರ್ ಜೈಕೀರ್ತಿ ಅವರು ಪ್ರಕರಣ ದಾಖಲಿಸಿಕೊಂಡು, ಸಿಪಿಸಿ ಶಿವಣ್ಣ ಅವರ ಸಹಕಾರದೊಂದಿಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅನಂತ್ ಹೆಚ್. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಸುಧಾ ಅವರು ವಾದ ಮಂಡಿಸಿದ್ದರು.



