ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುರಾಜ್ಯ ಸುದ್ದಿ

ಕಲಬುರಗಿ: ಶಾಲಾ ಬಸ್ ಡಿಕ್ಕಿ ಹೊಡೆದು ಐದು ವರ್ಷದ ಮಾಸ್ಟರ್ ವೇದಾಂತ ದಾರುಣ ಸಾವು

Share News

ಕಲಬುರಗಿ : ನಗರದ ತಾರಫೈಲ್ ಪ್ರದೇಶದ ಅಂಬಿಕಾ ನಗರದಲ್ಲಿ ಜುಲೈ 17ರ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ದುರ್ಘಟನೆಯಲ್ಲಿ, ರಸ್ತೆ ಬದಿಯಲ್ಲಿ ಕುಳಿತಿದ್ದ ಐದು ವರ್ಷದ ಬಾಲಕನಿಗೆ ಖಾಸಗಿ ಶಾಲಾ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

​ಮೃತ ಬಾಲಕನನ್ನು ವೇದಾಂತ ಸಂಬಣ್ಣ ಮಾಂಗೆನವರ (5) ಎಂದು ಗುರುತಿಸಲಾಗಿದೆ. ಮೂಲತಃ ಮಳಖೇಡ ನಿವಾಸಿಯಾದ ವೇದಾಂತ, ಅಲ್ಲಿನ ಸೇಂಟ್ ಜಾನ್ಸ್ ಶಾಲೆಯಲ್ಲಿ ಎಲ್‌ಕೆಜಿ ವ್ಯಾಸಂಗ ಮಾಡುತ್ತಿದ್ದನು. ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಕಲಬುರಗಿಯ ಅಂಬಿಕಾ ನಗರದಲ್ಲಿರುವ ತಾತ ನಾಗರಾಜ ಶಿವನೂರ ಅವರ ಮನೆಗೆ ಬಂದಿದ್ದ ವೇಳೆ ಈ ಕರುಣಾಜನಕ ದುರಂತ ಸಂಭವಿಸಿದೆ.

ಶುಕ್ರವಾರ ಬೆಳಿಗ್ಗೆ ಸುಮಾರು 8.30ರ ವೇಳೆಗೆ ವೇದಾಂತ ರಸ್ತೆ ಬದಿಯಲ್ಲಿ ಶೌಚಕ್ಕೆ ಕುಳಿತಿದ್ದಾಗ, ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಿದ್ದ ಖಾಸಗಿ ಸಿಬಿಎಸ್‌ಇ ಶಾಲೆಯ ಬಸ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಾಲಕ ತೀವ್ರವಾಗಿ ಗಾಯಗೊಂಡಿದ್ದನು.

​ಕೂಡಲೇ ಸ್ಥಳೀಯರು ಹಾಗೂ ಕುಟುಂಬಸ್ಥರು ಆತನನ್ನು ಕಲಬುರಗಿಯ ಜಿಮ್ಸ್ (GIMS) ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ.

ಈ ದುರಂತದಿಂದ ವೇದಾಂತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಅಂಬಿಕಾ ನಗರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ವಸತಿ ಪ್ರದೇಶಗಳಲ್ಲಿ ಶಾಲಾ ವಾಹನಗಳ ಸಂಚಾರದ ವೇಳೆ ಚಾಲಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಹಾಗೂ ವೇಗಕ್ಕೆ ಲಗಾಮು ಹಾಕಬೇಕು ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಚಾಲಕನ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯವೇ ಕಾರಣವೇ ಎಂಬ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.

 


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!