ಕೌಟುಂಬಿಕ ಕಲಹಕ್ಕೆ ಹೆಂಡತಿ, ಇಬ್ಬರು ಕಂದಮ್ಮಗಳನ್ನು ಕೊಂದ ಗಂಡ – ತಾನೂ ಆತ್ಮಹತ್ಯೆ

ಹುಣಸೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನೊಬ್ಬ ತನ್ನ ಹೆಂಡತಿ ಹಾಗೂ ಇಬ್ಬರು ಮುದ್ದಾದ ಹೆಣ್ಣು ಮಕ್ಕಳನ್ನು ಭೀಕರವಾಗಿ ಕೊಲೆ ಮಾಡಿ, ತಾನೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನ ಮಾರುತಿ ಬಡಾವಣೆಯಲ್ಲಿ ನಡೆದಿದೆ.
ಮನೆಯ ಯಜಮಾನ ಹರೀಶ್ ಎಂಬಾತನೇ ಈ ಘೋರ ಕೃತ್ಯ ಎಸಗಿದ ವ್ಯಕ್ತಿ. ಈತನ ಹೆಂಡತಿ ನಿಶ್ಚಿತಾ, 7ನೇ ತರಗತಿ ಓದುತ್ತಿದ್ದ ಹಿರಿಯ ಮಗಳು ನೆಕ್ಸಾ ಹಾಗೂ 1ನೇ ತರಗತಿ ಓದುತ್ತಿದ್ದ ಕಿರಿಯ ಮಗಳು ರಕ್ಷಾ ಹತ್ಯೆಗೀಡಾದ ದುರ್ದೈವಿಗಳು.
ಆರೋಪಿ ಹರೀಶ್, ಹೆಂಡತಿ ಮತ್ತು ಇಬ್ಬರು ಮಕ್ಕಳ ಬಾಯಿ ಹಾಗೂ ಮೂಗಿಗೆ ಪ್ಲಾಸ್ಟರ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ನೇಣಿಗೆ ಶರಣಾಗಿ ಜೀವ ಬಿಟ್ಟಿದ್ದಾನೆ. ಈ ಘಟನೆಯಿಂದ ಇಡೀ ಹುಣಸೂರು ನಗರವೇ ತೀವ್ರ ಆಘಾತಕ್ಕೊಳಗಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮಲ್ಲಿಕಾರ್ಜುನ ಬಾಲದಂಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೌಟುಂಬಿಕ ಜಗಳವೇ ಈ ದಾರುಣ ಕೃತ್ಯಕ್ಕೆ ಮೂಲ ಕಾರಣ ಎನ್ನಲಾಗಿದ್ದು, ಈ ಕುರಿತು ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಹರೀಶ್ ಈ ಮಟ್ಟದ ತೀವ್ರ ನಿರ್ಧಾರ ಕೈಗೊಳ್ಳಲು ನಿಜವಾದ ಕಾರಣವೇನು ಎಂಬ ಬಗ್ಗೆ ಸುದೀರ್ಘ ತನಿಖೆ ನಡೆಸುತ್ತಿದ್ದಾರೆ.



