ಕಬಿನಿ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆ: ಕೆರೆ ತುಂಬಿಸಲು ಹಾಗೂ ಕುಡಿಯುವ ನೀರಿಗೆ ಪ್ರಥಮ ಆದ್ಯತೆ

ಬೆಂಗಳೂರು: ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಕಾಸ ಸೌಧದಲ್ಲಿ ಕಬಿನಿ ಜಲಾಶಯ ಯೋಜನೆಯ 2026-27ನೇ ಸಾಲಿನ ನೀರಾವರಿ ಸಲಹಾ ಸಮಿತಿ (ICC) ಸಭೆ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ಕಬಿನಿ ಜಲಾಶಯದ ಪ್ರಸ್ತುತ ಒಳಹರಿವು, ನೀರಿನ ಸಂಗ್ರಹಣೆ ಹಾಗೂ ಎಡ-ಬಲ ದಂಡೆ ನಾಲೆಗಳಿಗೆ ನೀರು ಹರಿಸುವ ಕುರಿತು ಜಲಾನಯನ ಪ್ರದೇಶದ ಶಾಸಕರು ಮತ್ತು ಉನ್ನತಾಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಲಾಯಿತು.
ಸಭೆಯ ಪ್ರಮುಖ ನಿರ್ಧಾರಗಳು ಹಾಗೂ ಮುಖ್ಯಾಂಶಗಳು:
ಕುಡಿಯುವ ನೀರಿಗೆ ಆದ್ಯತೆ: ಯಾವುದೇ ಪ್ರದೇಶದಲ್ಲಿ ಕುಡಿಯುವ ನೀರಿನ ಅಭಾವ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಜಲಮೂಲಗಳ ಸಮರ್ಪಕ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಯಿತು.
ಕೆರೆ-ಕಟ್ಟೆಗಳನ್ನು ತುಂಬಿಸಲು ಕ್ರಮ: ಲಭ್ಯವಿರುವ ಜಲಸಂಪನ್ಮೂಲವನ್ನು ಪರಿಗಣಿಸಿ, ಪ್ರದೇಶದ ಕೆರೆ-ಕಟ್ಟೆಗಳನ್ನು ತುಂಬಿಸಲು ಪ್ರಥಮ ಆದ್ಯತೆ ನೀಡಲು ನಿರ್ಧರಿಸಲಾಯಿತು.
ಕೃಷಿಗೆ ನೀರಿನ ಪೂರೈಕೆ: ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೀರಿನ ಲಭ್ಯತೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಮುಂದಿನ ಕೃಷಿ ಹಂಗಾಮಿಗೆ ಸೂಕ್ತ ಯೋಜನೆಯನ್ನು ರೂಪಿಸಲಾಯಿತು.
ಸಭೆಯಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ್, ಎ.ಆರ್. ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಮರಿಸ್ವಾಮಿ ಹಾಗೂ ಮೈಸೂರು-ಚಾಮರಾಜನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.



