ಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿ

ಹುಬ್ಬಳ್ಳಿ: ಬೈಕ್-ಕಾರು ನಡುವೆ ಭೀಕರ ಅಪಘಾತ; ಬಿಜೆಪಿ ಮುಖಂಡನ ಪುತ್ರ ದುರ್ಮರಣ

Share News

ಹುಬ್ಬಳ್ಳಿ, ಮಾ. 20: ನಗರದ ಉಣಕಲ್ ಕೆರೆ ಸಮೀಪದ ಶೇಜವಾಡಕರ ಬಡಾವಣೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 16 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ ಪುತ್ರ ನಮೀಷ್ ಸಂಗಳದ (16) ಎಂದು ಗುರುತಿಸಲಾಗಿದೆ.

9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಮೀಷ್, ತನ್ನ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ನಮೀಷ್ ಸುಮಾರು 30 ಅಡಿ ದೂರಕ್ಕೆ ಎಸೆಲ್ಪಟ್ಟಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.

ಸ್ನೇಹಿತರೊಂದಿಗೆ ಸೇರಿ ಸಾಮಾಜಿಕ ಜಾಲತಾಣಗಳಿಗಾಗಿ ‘ರೀಲ್ಸ್’ ಮಾಡುವ ಭರದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂಬ ಬಲವಾದ ಆರೋಪ ಕೇಳಿಬಂದಿದೆ. ಈ ಭೀಕರ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.

ಅಪಘಾತಕ್ಕೀಡಾದ ಕಾರನ್ನು ಚಾಲನೆ ಮಾಡುತ್ತಿದ್ದ ವ್ಯಕ್ತಿ ಕೂಡ 18 ವರ್ಷದ ಯುವಕನಾಗಿದ್ದು, ಆತನ ಬಳಿ ಯಾವುದೇ ಅಧಿಕೃತ ಚಾಲನಾ ಪರವಾನಗಿ (Driving License) ಇರಲಿಲ್ಲ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. “ನಾನು ಕಾರನ್ನು ನಿಲ್ಲಿಸಿದ್ದೆ, ಬೈಕ್ ಸವಾರನೇ ವೇಗವಾಗಿ ಬಂದು ಗುದ್ದಿದ್ದಾನೆ” ಎಂದು ಕಾರು ಚಾಲಕ ಹೇಳಿಕೆ ನೀಡುತ್ತಿದ್ದರೂ, ಪರವಾನಗಿ ಇಲ್ಲದೆ ಚಾಲನೆ ಮಾಡಿದ್ದು ಕಾನೂನು ಉಲ್ಲಂಘನೆಯಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಕಿಮ್ಸ್ (KIMS) ಆಸ್ಪತ್ರೆಗೆ ಭೇಟಿ ನೀಡಿದರು. ಮೃತ ನಮೀಷ್ ಪೋಷಕರಿಗೆ ಸಾಂತ್ವನ ಹೇಳಿದ ಶಾಸಕರು, ಘಟನೆಯ ಬಗ್ಗೆ ಮಾಹಿತಿ ಪಡೆದರು.

​ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!