ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಲಸಿಕೆ ದಾಸ್ತಾನಿಗೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸೂಚನೆ!

ಒಂದು ಜೀವವೂ ಹಾವು ಕಡಿತದಿಂದ ನಷ್ಟವಾಗಬಾರದು ಎಂಬ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಹಾವು ವಿಷ ನಿರೋಧಕ (Anti-Snake Venom) ಔಷಧಿಗಳನ್ನು ದಾಸ್ತಾನು ಇರಿಸಿಕೊಳ್ಳಲು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಔಷಧಿ ದಾಸ್ತಾನು ಹಾಗೂ ತರಬೇತಿ: ಜಿಲ್ಲೆಯ ಮತ್ತು ತಾಲೂಕಿನ ಪ್ರತಿಯೊಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯವಿರಬೇಕು. ತುರ್ತು ಸಮಯದಲ್ಲಿ ಸರಿಯಾದ ಪ್ರಥಮ ಚಿಕಿತ್ಸೆ ನೀಡಲು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ನಿರಂತರ ತರಬೇತಿ ಆಯೋಜಿಸಬೇಕು.
ಹಾವು ರಕ್ಷಕರ ನಂಬರ್ ಪ್ರಕಟಣೆ: ಗ್ರಾಮೀಣ ಭಾಗದಲ್ಲಿ ಮನೆಗಳಲ್ಲಿ ಹಾವು ಕಂಡುಬಂದಾಗ ಸಾರ್ವಜನಿಕರಿಗೆ ಸಹಾಯವಾಗುವಂತೆ, ಅರಣ್ಯ ಇಲಾಖೆ ಮೂಲಕ ಅಧಿಕೃತ ಹಾವು ರಕ್ಷಕರ (Snake Rescuers) ಮೊಬೈಲ್ ಸಂಖ್ಯೆಗಳನ್ನು ಬಹಿರಂಗವಾಗಿ ಪ್ರಕಟಿಸಲು ಡಿಸಿ ಸೂಚಿಸಿದರು.
ಜನಜಾಗೃತಿ ಮತ್ತು ಮೂಢನಂಬಿಕೆ ತಡೆ: ಹಾವು ಕಡಿತಕ್ಕೆ ಸೂಕ್ತ ಮಾಹಿತಿ ಕೊರತೆ ಮತ್ತು ಮೂಢನಂಬಿಕೆಗಳೇ ಸಾವಿಗೆ ಕಾರಣವಾಗುತ್ತಿದ್ದು, ಶಾಲೆಗಳು, ಗ್ರಾಮ ಪಂಚಾಯಿತಿಗಳು ಹಾಗೂ ಅರಣ್ಯ ಅಂಚಿನ ಪ್ರದೇಶಗಳಲ್ಲಿ ಪ್ರಥಮ ಚಿಕಿತ್ಸೆ ಕುರಿತು ವ್ಯಾಪಕ ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್:
”ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 144 ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, ಸೂಕ್ತ ಚಿಕಿತ್ಸೆ ನೀಡಿ ಎಲ್ಲರನ್ನೂ ಗುಣಮುಖರನ್ನಾಗಿಸಲಾಗಿದೆ. ಪ್ರಸ್ತುತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ ದಾಸ್ತಾನಿದೆ. ಆಶಾ, ಎಎನ್ಎಮ್ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳ ಅರಿವು ಮೂಡಿಸಲಾಗುತ್ತಿದೆ.”
ಸಭೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಶ್ರೀನಿವಾಸ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಂಜುಂಡಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಪ್ರಮುಖರು ಉಪಸ್ಥಿತರಿದ್ದರು.



