ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಮಾನವೀಯತೆ, ಪರೋಪಕಾರಿ ಗುಣದಿಂದ ಬದುಕು ಸಾರ್ಥಕ – ಸಂಜೀವಕುಮಾರ ನೀರಲಗಿ

Share News

ಹಾವೇರಿ: ಜೀವನದಲ್ಲಿ ಮಾನವೀಯತೆಯೊಂದಿಗೆ ಪರೋಪಕಾರಿ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯಾಧ್ಯಕ್ಷರಾದ ಸಂಜೀವಕುಮಾರ ನೀರಲಗಿ ಹೇಳಿದರು.

​ಇಲ್ಲಿನ ನೀಲನಗೌಡ್ರ ನಗರದಲ್ಲಿರುವ ಎಸ್‌ಜಿಎಸ್‌ಎಲ್‌ಪಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಹಾಗೂ ರಾಜ್ಯ ಶಾಖೆ ಮತ್ತು ಕಾಲೇಜಿನ ವೈಆರ್‌ಸಿ ಘಟಕದ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಆಗಸ್ಟ್-12 ಜಿನೀವಾ ಕನ್ವೆನ್ಷನ್ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

​ವಿಶ್ವಶಾಂತಿಗೆ ಜಿನೀವಾ ಒಪ್ಪಂದ ಪ್ರಮುಖ:

ವಿದ್ಯಾರ್ಥಿಗಳು ಹಾಗೂ ಯುವಜನರು ಸಮಾಜದ ಬಗ್ಗೆ ಕಳಕಳಿ ಹೊಂದಿರಬೇಕು. ರೆಡ್ ಕ್ರಾಸ್ ಸಂಸ್ಥೆಯು ವಿಶ್ವಮಟ್ಟದಲ್ಲಿ ವಿಶ್ವಶಾಂತಿ ಹಾಗೂ ಮಾನವೀಯ ಸೇವೆಗಾಗಿ ನಿರಂತರ ಶ್ರಮಿಸುತ್ತಿದೆ. ಜಿನೀವಾ ಒಪ್ಪಂದವು ವಿಶ್ವಶಾಂತಿಗೆ ಹೆಚ್ಚಿನ ಮಹತ್ವ ನೀಡುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಮೀಸಲಾತಿ ಜಾರಿಯಾಗಲಿದ್ದು, ವಿದ್ಯಾರ್ಥಿನಿಯರು ನಾಯಕತ್ವ ಹಾಗೂ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ರೆಡ್ ಕ್ರಾಸ್ ಸಂಸ್ಥೆಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

​ಮಾನವೀಯ ಮೌಲ್ಯಗಳ ಜಾಗೃತಿ:

ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿದ ಸಾಹಿತಿ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಪದಾಧಿಕಾರಿ ಹನುಮಂತಗೌಡ ಗೊಲ್ಲರ, “ಜಿನೀವಾ ಒಪ್ಪಂದ ದಿನಾಚರಣೆಯು ಮಾನವೀಯ ಮೌಲ್ಯಗಳ ಮೂಲಕ ವಿಶ್ವಶಾಂತಿಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮಹತ್ವದ ದಿನವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ವಿನಯ, ಸಹಕಾರ ಹಾಗೂ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದರು.

​ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಇಂದಿರಾ ಬಾಗಲಕೋಟೆ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

​ಕಾರ್ಯಕ್ರಮದಲ್ಲಿ ವೈಆರ್‌ಸಿ ಕಾರ್ಯಕ್ರಮ ಅಧಿಕಾರಿ ವೀರೇಶ ಹಿತ್ತಲಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಡಿಆರ್‌ಸಿಯ ಡಾ. ಅಂಕಿತ ಆನಂದ ಅವರು ಯುವ ರೆಡ್ ಕ್ರಾಸ್ ಘಟಕದ ಕ್ರಿಯಾಶೀಲತೆ ಕುರಿತು ಬೆಳಕು ಚೆಲ್ಲಿದರು.

​ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯದರ್ಶಿ ನಿಂಗಪ್ಪ ಆರೇರ, ಖಜಾಂಚಿ ಪ್ರಭು ಹಿಟ್ನಳ್ಳಿ, ಜಿಲ್ಲಾ ಸಮಿತಿ ಸದಸ್ಯರಾದ ನಾಗರಾಜ ಇಚ್ಚಂಗಿ, ಉಡಚಪ್ಪ ಮಾಳಗಿ, ವಿಜಯಕುಮಾರ ಚಿನ್ನಿಕಟ್ಟಿ, ಉಜ್ವಲ ಹಿರೇಗೌಡ್ರ, ಅಲೆಮಾರಿ ಸಮಾಜದ ಅಧ್ಯಕ್ಷ ವಿಬೂತಿ ಶೆಟ್ಟಿ, ಡಿಡಿಆರ್‌ಸಿ ನೋಡಲ್ ಅಧಿಕಾರಿ ಪೂರ್ಣಿಮಾ ಮಠದ, ಉಪನ್ಯಾಸಕರಾದ ಕರಬಸಪ್ಪ ನಂದಿಹಳ್ಳಿ, ಸುಜಾತಾ ಕಡ್ಲಿ, ರಾಮಚಂದ್ರಪ್ಪ ಬಿ.ಎನ್., ಕಾಂತೇಶ ಅಂಬಿಗೇರ, ಮೆಹಬೂಬಸಾಬ ಸುಭಾನಿ, ಇರ್ಶಾದಲಿ ದುಂಡಸಿ, ಜಗದೀಶ ಬೇಟಗೇರಿ, ನವೀನ ಮುಗದೂರ, ಫಕ್ಕೀರೇಶ ಬಾರಕೇರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!