ಹಾವೇರಿ: ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ; ನಜ್ಜುಗುಜ್ಜಾದ ಕ್ಯಾಬಿನ್ನಲ್ಲಿ ಸಿಲುಕಿದ್ದ ಚಾಲಕನ ಸಾಹಸಮಯ ರಕ್ಷಣೆ!

ಹಾವೇರಿ: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಲಾರಿಯ ಕ್ಯಾಬಿನ್ನಲ್ಲಿ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಚಾಲಕನನ್ನು ಅಗ್ನಿಶಾಮಕ ದಳ ಮತ್ತು 108 ಅಂಬುಲೆನ್ಸ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಹಾವೇರಿ ನಗರದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಲಾರಿಗೆ, ವೇಗವಾಗಿ ಬಂದ ಮತ್ತೊಂದು ಲಾರಿ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಲಿಸುತ್ತಿದ್ದ ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇಂಜಿನ್ ಭಾಗದಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಚಾಲಕ ಕುಮಾರೇಶ್ ಗಾಡಿಯ ಕ್ಯಾಬಿನ್ ಒಳಗೆ ಸಿಲುಕಿಕೊಂಡು ಹೊರಬರಲಾಗದೆ ತೀವ್ರವಾಗಿ ನರಳುತ್ತಿದ್ದರು.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದಾವಿಸಿದ 108 ಅಂಬುಲೆನ್ಸ್ ಸಿಬ್ಬಂದಿ ತೌಫಿಕ್ ಪಠಾಣ್ ಮತ್ತು ಶುಶ್ರೂಷಕ ಶಂಕರ ಲಮಾಣಿ ಅವರು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಕೈಜೋಡಿಸಿದರು. ಲಾರಿಯ ಮುಂಭಾಗ ನಜ್ಜುಗುಜ್ಜಾಗಿದ್ದರಿಂದ ಚಾಲಕನನ್ನು ಹೊರತೆಗೆಯುವುದು ಸವಾಲಾಗಿತ್ತು. ಆದರೂ ಸಿಬ್ಬಂದಿ ಹರಸಾಹಸ ಪಟ್ಟು, ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಿ ಚಾಲಕನನ್ನು ಸುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರು ಮಾಡಿದರು.
ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಕುಮಾರೇಶ್ ಅವರನ್ನು ತಕ್ಷಣವೇ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ಸ್ಪಂದಿಸಿ, ಬೆಂಕಿ ಅವಘಡದ ನಡುವೆಯೂ ಚಾಲಕನ ಜೀವ ಉಳಿಸಿದ ಅಗ್ನಿಶಾಮಕ ದಳ ಹಾಗೂ ಅಂಬುಲೆನ್ಸ್ ಸಿಬ್ಬಂದಿಯ ಧೈರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.



