ಪತ್ರಕರ್ತರಲ್ಲಿ ಇಂದಿಗೂ ಘಟ್ಟಿತನ ಉಳಿದುಕೊಂಡಿದೆ: ಪ್ರೊ. ತ್ಯಾಗರಾಜ ಪ್ರತಿಪಾದನೆ

ವರದಿ: ಸಮಾಜದಲ್ಲಿರುವ ಟೊಳ್ಳುತನ ಹಾಗೂ ಡೊಂಕುಗಳನ್ನು ಸರಿಪಡಿಸುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪತ್ರಕರ್ತರಲ್ಲಿ ಇಂದಿಗೂ ಘಟ್ಟಿತನ ಉಳಿದುಕೊಂಡಿದ್ದು, ಸತ್ಯವನ್ನು ಸಮಾಜದ ಮುಂದಿಡುವ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಪ್ರೊ. ತ್ಯಾಗರಾಜ ಹೇಳಿದರು.
ನಗರದಲ್ಲಿ ನಡೆದ ಕೃತಿ ಬಿಡುಗಡೆ ಸಮಾರಂಭದಲ್ಲಿ ತ್ಯಾಗರಾಜ ಕದಂ ಅವರ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪತ್ರಕರ್ತರು ತಪಸ್ವಿಗಳಂತೆ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ತಮ್ಮ ವೈಯಕ್ತಿಕ ನೋವುಗಳನ್ನು ಬದಿಗೊತ್ತಿ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮಾತೃ ಹೃದಯ ಅವರಲ್ಲಿದೆ ಎಂದರು.
ಸಮಾಜದ ಡೊಂಕು ತಿದ್ದುವ ಕೆಲಸವಾಗಲಿ: ಡಿಸಿಪಿ ನಾರಾಯಣ ಬರಮನಿ
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪೊಲೀಸ್ ಉಪ ಆಯುಕ್ತ (DCP) ನಾರಾಯಣ ಬರಮನಿ ಅವರು, “ವೇಗದ ಯುಗದಲ್ಲಿ ಸುದ್ದಿಯನ್ನು ತಲುಪಿಸುವುದಷ್ಟೇ ಅಲ್ಲದೆ, ಸಮಾಜದ ಆರೋಗ್ಯ ಮತ್ತು ಸಾಮರಸ್ಯದ ಬಗ್ಗೆಯೂ ಪತ್ರಕರ್ತರು ಕಾಳಜಿ ವಹಿಸಬೇಕು. ಧಾರ್ಮಿಕ ವಿಷಯಗಳನ್ನು ಬಿಂಬಿಸುವಾಗ ಸಮಾಜದ ಮೇಲಾಗುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ವಿಶೇಷವಾಗಿ ಗ್ರಾಮೀಣ ಭಾಗದ ಪತ್ರಕರ್ತರಿಗೆ ಸೂಕ್ತ ಪ್ರೋತ್ಸಾಹ ಸಿಗಬೇಕು” ಎಂದು ಅಭಿಪ್ರಾಯಪಟ್ಟರು.
ಪತ್ರಿಕೆಗಳು ಪ್ರಜಾಪ್ರಭುತ್ವದ ಕನ್ನಡಿ: ಆಯುಕ್ತ ಕಾರ್ತಿಕ್ ಎಂ.
ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಮಾತನಾಡಿ, “ಸಾಮಾಜಿಕ ಜಾಲತಾಣಗಳ ಹಾವಳಿಯ ನಡುವೆ ಪತ್ರಿಕೆಗಳ ವಿಶ್ವಾಸಾರ್ಹತೆ ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ. ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸುವ ಪತ್ರಿಕೆಗಳು, ಸತ್ಯಾಸತ್ಯತೆಯನ್ನು ಪರಿಶೀಲಿಸಿ ಜವಾಬ್ದಾರಿಯಿಂದ ಸುದ್ದಿ ಪ್ರಕಟಿಸಬೇಕು” ಎಂದರು.
ಪತ್ರಕರ್ತರಿಗೆ ವಿಮಾ ಸೌಲಭ್ಯ ಹಾಗೂ ಭದ್ರತೆ ಅಗತ್ಯ: ಡಾ. ಅಲ್ಲಮಪ್ರಭು ಸ್ವಾಮೀಜಿ
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಡಾ. ಅಲ್ಲಮಪ್ರಭು ಸ್ವಾಮೀಜಿ, “ಪ್ರತಿಕೂಲ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಪತ್ರಕರ್ತರ ಆರೋಗ್ಯ ಮತ್ತು ಕುಟುಂಬದ ಭದ್ರತೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಸಮರ್ಪಕ ವಿಮಾ ಸೌಲಭ್ಯ ಕಲ್ಪಿಸಬೇಕು. ಡಿಜಿಟಲ್ ಯುಗದಲ್ಲಿ ಮುದ್ರಣ ಮಾಧ್ಯಮವನ್ನು ಉಳಿಸಿಕೊಳ್ಳಲು ಸಮಾಜ ಕೈಜೋಡಿಸಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಸಾದ್ ರಾಮಂಪುರೆ ಸೇರಿದಂತೆ ಹಲವು ಗಣ್ಯರು, ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.



