ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಐತಿಹಾಸಿಕ ಹೆಜ್ಜೆ: ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್

Share News

ತುಮಕೂರು: ಜಿಲ್ಲೆಯ ಕೊಳಗೇರಿ ಹಾಗೂ ಕಂದಾಯ ರಹಿತ ಪ್ರದೇಶಗಳಲ್ಲಿ ದಶಕಗಳಿಂದ ವಾಸಿಸುತ್ತಿರುವ ಕುಟುಂಬಗಳಿಗೆ ಕಾನೂನುಬದ್ಧ ಹಕ್ಕುಪತ್ರ ವಿತರಿಸಲು ಜಿಲ್ಲಾಡಳಿತ ಐತಿಹಾಸಿಕ ಹೆಜ್ಜೆ ಇಟ್ಟಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

​ಶಿರಾ ತಾಲೂಕಿನ ಹುಣಸೆಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಮೂಲಭೂತ ಸೌಕರ್ಯಗಳ ಕೊರತೆ ಗಮನಕ್ಕೆ ಬಂದಿದ್ದು, ಗ್ರಾಮವು ‘ಕಂದಾಯ ಗ್ರಾಮ’ವಾಗಿ ಘೋಷಣೆಯಾಗದಿರುವುದೇ ಇದಕ್ಕೆ ಮೂಲ ಕಾರಣ ಎಂಬುದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳ ರಚನೆ ಹಾಗೂ ಹಕ್ಕುಪತ್ರ ವಿತರಣೆಗೆ ವಿಶೇಷ ಆಂದೋಲನ ರೂಪಿಸಲಾಗಿದೆ.

​ವಿಶೇಷ ಆಂದೋಲನದ ಪ್ರಮುಖಾಂಶಗಳು:

​ಈಗಾಗಲೇ ವಿತರಣೆ: ಅಭಿಯಾನದಡಿ ಇದುವರೆಗೆ ೨೨,೦೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಹಾಗೂ ಅಲೆಮಾರಿ ಮತ್ತು ಹಕ್ಕಿಪಿಕ್ಕಿ ಕಾಲೋನಿಯ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ.

​ಖಾಸಗಿ ಕೊಳಗೇರಿಗಳ ಸರ್ವೆ: ೪ನೇ ಹಂತವಾಗಿ ಖಾಸಗಿ ಒಡೆತನದ ಜಮೀನುಗಳ ಕೊಳಗೇರಿಯಲ್ಲಿ ವಾಸಿಸುತ್ತಿರುವ ೨,೬೧೭ ಕುಟುಂಬಗಳಿಗೆ ಕರ್ನಾಟಕ ಭೂ ಸುಧಾರಣಾ ಕಾಯ್ದೆ-೧೯೭೧ರ ಕಲಂ ೩೮(A) ಅಡಿಯಲ್ಲಿ ಸರ್ವೆ ನಡೆಸಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.

​ಸರ್ಕಾರಿ ಜಮೀನು ನಿವಾಸಿಗಳಿಗೆ ಹಕ್ಕುಪತ್ರ: ತುಮಕೂರು ನಗರದ ಎಳ್ಳಾರ ಬಂಡೆ, ಅರಳೀಮರದ ಪಾಳ್ಯ, ಎಸ್.ಎನ್. ಪಾಳ್ಯ, ಭಾರತಿ ನಗರ, ಬಿದರುಮೇಳೆ ತೋಟ, ಎನ್.ಆರ್. ಕಾಲೋನಿ ಹಾಗೂ ಎಸ್.ಎಲ್.ಎನ್. ನಗರದಲ್ಲಿ ಸರ್ಕಾರಿ ಜಮೀನಿನಲ್ಲಿ ವಾಸಿಸುತ್ತಿರುವ ೩೪೯ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುವುದು.

​ಖಾಸಗಿ ಜಮೀನುಗಳನ್ನು ನಿಯಮಾನುಸಾರ ಸರ್ಕಾರಕ್ಕೆ ಸ್ವಾಧೀನಪಡಿಸಿಕೊಂಡು, ಕಳೆದ ೩೦-೪೦ ವರ್ಷಗಳಿಂದ ಕಾಯುತ್ತಿರುವ ಕುಟುಂಬಗಳಿಗೆ ಶಾಶ್ವತ ಮಾಲೀಕತ್ವದ ಹಕ್ಕು ಕಲ್ಪಿಸಲಾಗುವುದು. ಸರ್ವೆ ಕಾರ್ಯ ಮುಗಿದ ತಕ್ಷಣ ಹಕ್ಕುಪತ್ರ ವಿತರಿಸಲಾಗುತ್ತಿದ್ದು, ಇದರಿಂದ ಒಟ್ಟು ೩,೦೦೦ ಕೊಳಗೇರಿ ಕುಟುಂಬಗಳ ಸುಮಾರು ೧೪,೦೦೦ ಜನರಿಗೆ ನೇರ ಅನುಕೂಲವಾಗಲಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!