ಮನೆಯಲ್ಲೇ ಅಕ್ರಮ ಕ್ಲಿನಿಕ್ ನಡೆಸುತ್ತಿದ್ದ ಸ್ಟಾಫ್ ನರ್ಸ್ ಸಸ್ಪೆಂಡ್: ಶಿಸ್ತುಕ್ರಮ ಜರುಗಿಸಿದ ಆರೋಗ್ಯ ಇಲಾಖೆ

ಚಿಕ್ಕಬಳ್ಳಾಪುರ: ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಲೇ, ಯಾವುದೇ ಪರವಾನಗಿ ಇಲ್ಲದೆ ಸ್ವಂತ ಮನೆಯಲ್ಲೇ ಅಕ್ರಮ ಕ್ಲಿನಿಕ್ ನಡೆಸುತ್ತಿದ್ದ ಸ್ಟಾಫ್ ನರ್ಸ್ ಜಿ.ಬಿ. ಸುನಿತಾ ಅವರನ್ನು ಆರೋಗ್ಯ ಇಲಾಖೆ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ.
ಘಟನೆಯ ವಿವರ:
ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯಾಗಿದ್ದ (ಸ್ಟಾಫ್ ನರ್ಸ್) ಜಿ.ಬಿ. ಸುನಿತಾ, ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಗ್ರಾಮದಲ್ಲಿರುವ ತಮ್ಮ ಸ್ವಂತ ನಿವಾಸದಲ್ಲೇ ಅಕ್ರಮವಾಗಿ ಕ್ಲಿನಿಕ್ ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಸಂಸದ ಡಾ. ಕೆ. ಸುಧಾಕರ್ ಹಾಗೂ ಶಾಸಕ ಪ್ರದೀಪ್ ಈಶ್ವರ್ ಅವರ ತವರು ಕ್ಷೇತ್ರವಾದ ಪೆರೇಸಂದ್ರದಲ್ಲೇ ಈ ಅಕ್ರಮ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದುದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಇಲಾಖೆಯಿಂದ ಅಮಾನತು ಆದೇಶ:
ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿ 15 ದಿನಗಳು ಕಳೆದರೂ ಕ್ರಮ ಕೈಗೊಳ್ಳದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ನವೀನ್ ಭಟ್ ಅವರ ಸೂಚನೆಯ ಮೇರೆಗೆ, ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ಒ) ಡಾ. ಹೆಚ್.ಸಿ. ಚೇತನ್ ಅವರು ಈ ಅಮಾನತು ಆದೇಶ ಹೊರಡಿಸಿದ್ದಾರೆ.
ಅಮಾನತಿನ ಜೊತೆಗೆ, ನರ್ಸ್ನ ಕರ್ತವ್ಯಲೋಪ ಹಾಗೂ ಅಕ್ರಮ ವೈದ್ಯಕೀಯ ಚಿಕಿತ್ಸೆ ಕುರಿತು ಸಮಗ್ರ ಇಲಾಖಾ ತನಿಖೆಗೂ ಆದೇಶಿಸಲಾಗಿದ್ದು, ತನಿಖಾ ವರದಿ ಬಂದ ಬಳಿಕ ಮುಂದಿನ ಕಠಿಣ ಕಾನೂನು ಕ್ರಮ ಜರುಗಿಸುವ ಸಾಧ್ಯತೆಯಿದೆ.



