ದೇವನಹಳ್ಳಿಯ ಸರ್ಕಾರಿ ಹಾಸ್ಟೆಲ್ಗಳಿಗೆ ಜಿಪಂ ಸಿಇಒ ಡಾ. ವಾಸಂತಿ ಅಮರ್ ದಿಢೀರ್ ಭೇಟಿ: ವಿದ್ಯಾರ್ಥಿನಿಯರ ಜೊತೆ ಊಟ ಸೇವಿಸಿ ಆಹಾರ ಗುಣಮಟ್ಟ ಪರಿಶೀಲನೆ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ (CEO) ಡಾ. ವಾಸಂತಿ ಅಮರ್ (ಐಎಎಸ್) ಅವರು ದೇವನಹಳ್ಳಿ ನಗರದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಹಾಸ್ಟೆಲ್ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಪಾಸಣೆ ವೇಳೆ ಪ್ರತಿಯೊಂದು ಕೊಠಡಿಗೂ ಸ್ವತಃ ಭೇಟಿ ನೀಡಿದ ಸಿಇಒ ಅವರು, ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಸಿಗುತ್ತಿರುವ ಮೂಲಭೂತ ಸೌಕರ್ಯಗಳು ಮತ್ತು ಕುಂದುಕೊರತೆಗಳ ಕುರಿತು ಪ್ರತ್ಯಕ್ಷವಾಗಿ ಮಾಹಿತಿ ಪಡೆದುಕೊಂಡರು.
ವಿದ್ಯಾರ್ಥಿನಿಲಯದ ಅಡುಗೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಆಹಾರ ತಯಾರಿಕೆಯಲ್ಲಿ ತಾಜಾ ತರಕಾರಿಗಳನ್ನು ಹೆಚ್ಚಾಗಿ ಬಳಸುವಂತೆ ಅಡುಗೆ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಅಲ್ಲದೆ, ಸಿದ್ಧಪಡಿಸಿದ್ದ ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ವಿದ್ಯಾರ್ಥಿನಿಯರೊಂದಿಗೆ ಕುಳಿತು ಸ್ವತಃ ಊಟ ಸೇವಿಸುವ ಮೂಲಕ ಸೌಲಭ್ಯಗಳನ್ನು ಖಾತರಿಪಡಿಸಿಕೊಂಡರು.
ಇದೇ ವೇಳೆ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿ, ಅಭ್ಯಾಸ ಕ್ರಮ ಹಾಗೂ ವಸತಿ ನಿಲಯದಲ್ಲಿ ಕಾಪಾಡಿಕೊಳ್ಳಬೇಕಾದ ಆರೋಗ್ಯಕರ ಸ್ವಚ್ಛತೆಯ ಕುರಿತು ವಿದ್ಯಾರ್ಥಿನಿಯರೊಂದಿಗೆ ಡಾ. ವಾಸಂತಿ ಅಮರ್ ಅವರು ಸವಿಸ್ತಾರವಾಗಿ ಸಮಾಲೋಚನೆ ನಡೆಸಿ ಮಾರ್ಗದರ್ಶನ ನೀಡಿದರು.



