ಮಂಗಳೂರು: ಬಾಂಗ್ಲಾದೇಶಿಗರ ಅಕ್ರಮ ನೇಮಕಾತಿ ಜಾಲ ಭೇದಿಸಿದ ಪೊಲೀಸ್; ಮೂವರು ಕಿಂಗ್ಪಿನ್ಗಳ ಬಂಧನ

ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ಬಾಂಗ್ಲಾದೇಶದ ಪ್ರಜೆಗಳನ್ನು ಅಕ್ರಮವಾಗಿ ಕೆಲಸಕ್ಕೆ ನೇಮಿಸುತ್ತಿದ್ದ ದಂಧೆಯ ಬೃಹತ್ ಜಾಲವನ್ನು ಭೇದಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮೂಲದ ಇಬ್ಬರು ಹಾಗೂ ಕೊಲ್ಕತ್ತಾದಲ್ಲಿ ಮತ್ತೊಬ್ಬ ಸೇರಿ ಒಟ್ಟು ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಶ್ಚಿಮ ಬಂಗಾಳ ಮೂಲದ ಮೊಯ್ದಿನ್ ಇಸ್ಲಾಂ ಮತ್ತು ದಿಲ್ವಾರ್ ಹುಸೈನ್ ಎಂದು ಗುರುತಿಸಲಾಗಿದೆ. ಈ ಜಾಲದ ಮೂರನೇ ಪ್ರಮುಖ ಆರೋಪಿ ರಸುಲ್ ಇಸ್ಲಾಂ ಎಂಬಾತನನ್ನು ಕೊಲ್ಕತ್ತಾದಲ್ಲಿ ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಕಾರ್ಮಿಕರನ್ನು ಉದ್ಯೋಗದ ಆಮಿಷ ಒಡ್ಡಿ ಮಂಗಳೂರಿಗೆ ಕರೆತಂದು ಪ್ರಮುಖ ಕೈಗಾರಿಕೆ ಹಾಗೂ ಸಂಸ್ಥೆಗಳಲ್ಲಿ ಕೆಲಸಕ್ಕೆ ನಿಯೋಜಿಸುತ್ತಿದ್ದರು. ಆದರೆ, ಈ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾದೇಶದ ಪ್ರಜೆಗಳನ್ನೂ ಸಹ ಯಾವುದೇ ಕಾನೂನುಬದ್ಧ ದಾಖಲೆಗಳಿಲ್ಲದೆ ಅಕ್ರಮವಾಗಿ ಗಡಿ ದಾಟಿಸಿ ಮಂಗಳೂರಿಗೆ ಕರೆತಂದು ಕೆಲಸಕ್ಕೆ ಸೇರಿಸುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಅಕ್ರಮ ದಂಧೆಯ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು, ನಗರದಲ್ಲಿದ್ದ ಮೊಯ್ದಿನ್ ಇಸ್ಲಾಂ ಹಾಗೂ ದಿಲ್ವಾರ್ ಹುಸೈನ್ ಇಬ್ಬರನ್ನೂ ಹೆಡೆಮುರುಡು ಕಟ್ಟಿದ್ದಾರೆ.
ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಮಂಗಳೂರು ಪೊಲೀಸರು, ಈ ಜಾಲದ ಮತ್ತೊಬ್ಬ ಪ್ರಮುಖ ಸೂತ್ರಧಾರಿ ರಸುಲ್ ಇಸ್ಲಾಂ ಪಶ್ಚಿಮ ಬಂಗಾಳದಲ್ಲೇ ತಲೆಮರೆಸಿಕೊಂಡಿರುವುದನ್ನು ಪತ್ತೆ ಹಚ್ಚಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಮಂಗಳೂರು ಪೊಲೀಸರ ವಿಶೇಷ ತಂಡವೊಂದು ಕೊಲ್ಕತ್ತಾಗೆ ಧಾವಿಸಿದೆ. ಅಲ್ಲಿನ ಸ್ಥಳೀಯ ಕೊಲ್ಕತ್ತಾ ಪೊಲೀಸರ ಜಂಟಿ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ, ಕೊನೆಗೂ ರಸುಲ್ ಇಸ್ಲಾಂನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಸದ್ಯ ಕೊಲ್ಕತ್ತಾದಲ್ಲಿ ಬಂಧಿತನಾಗಿರುವ ಮೂರನೇ ಆರೋಪಿಯನ್ನು ಮಂಗಳೂರಿಗೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಪೊಲೀಸರ ವಿಶೇಷ ತಂಡವು ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸಿದೆ. ಈ ಅಕ್ರಮ ಜಾಲದ ಹಿಂದೆ ಇನ್ನು ಯಾರೆಲ್ಲಾ ಭಾಗಿಯಾಗಿದ್ದಾರೆ ಮತ್ತು ಮಂಗಳೂರಿನಲ್ಲಿ ಎಷ್ಟು ಜನ ಬಾಂಗ್ಲಾದೇಶಿಗರು ಅಕ್ರಮವಾಗಿ ಆಶ್ರಯ ಪಡೆದಿದ್ದಾರೆ ಎಂಬ ಕುರಿತು ಪೊಲೀಸ್ ಇಲಾಖೆ ತೀವ್ರ ತನಿಖೆ ಕೈಗೊಂಡಿದೆ.



