ಜಿಲ್ಲಾ ಸುದ್ದಿಉಪಯುಕ್ತ ಮಾಹಿತಿಗಳುಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಕೊಟ್ಟೂರು: ಹ್ಯಾಳ್ಯಾ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ 58 ಮುಚ್ಚದಂತೆ ಗ್ರಾಮಸ್ಥರ ತೀವ್ರ ವಿರೋಧ — ಕೆ.ಎಸ್. ಈಶ್ವರಗೌಡ ನೇತೃತ್ವದಲ್ಲಿ ಹೋರಾಟದ ಎಚ್ಚರಿಕೆ

Share News

ಕೊಟ್ಟೂರು: ತಾಲೂಕಿನ ಹ್ಯಾಳ್ಯಾ ಗ್ರಾಮದ ಸಮೀಪದಲ್ಲಿ ಹಾದುಹೋಗಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 58 ಅನ್ನು ಯಾವುದೇ ಕಾರಣಕ್ಕೂ ಮುಚ್ಚದೇ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಹಾಗೂ ಎಂಜಿನಿಯರ್ ಕೆ.ಎಸ್. ಈಶ್ವರಗೌಡ ಮತ್ತು ಸ್ಥಳೀಯ ಗ್ರಾಮಸ್ಥರು ಕಟ್ಟುನಿಟ್ಟಾಗಿ ಒತ್ತಾಯಿಸಿದ್ದಾರೆ.

​ರೈಲ್ವೆ ಇಲಾಖೆಯ ನಿರ್ಧಾರಕ್ಕೆ ಅಸಮಾಧಾನ:

ಹ್ಯಾಳ್ಯಾ ಗ್ರಾಮದ ಸಮೀಪದ ರೈಲ್ವೆ ಟ್ರ್ಯಾಕ್ ಬಳಿ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಗೌಡ ಅವರು, 58 ರ ಗೇಟ್ ಮುಚ್ಚಿ 2 ಕಿ.ಮೀ ದೂರದಲ್ಲಿರುವ ಬೇವೂರು ಕ್ರಾಸ್ ಬಳಿಯ 59 ರ ಗೇಟ್ ಮೂಲಕ ಸಂಚರಿಸುವಂತೆ ಸೂಚಿಸಿರುವ ರೈಲ್ವೆ ಇಲಾಖೆಯ ಕ್ರಮ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದರಿಂದ ಸುತ್ತಮುತ್ತಲಿನ ಹಲವು ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

​ಈ ಹಿಂದೆ ಶಾಲೆಯ ಸಮೀಪವಿದ್ದ 59 ರ ಗೇಟ್ ಮುಚ್ಚಲು ಮುಂದಾದಾಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಗ್ರಾಮಸ್ಥರು ಸಹಕರಿಸಿದ್ದರು. ಆದರೆ ಈಗ 58 ರ ಗೇಟ್ ಅನ್ನು ಮುಚ್ಚಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.

​ರೈತರು ಹಾಗೂ ಸಾರ್ವಜನಿಕರಿಗೆ ಸಂಕಷ್ಟ:

ಈ ಗೇಟ್ ಮುಚ್ಚುವುದರಿಂದ ಮೋತಿಕಲ್ ತಾಂಡ ಹಾಗೂ ಲೊಟ್ಟನಕೆರೆ ಸೇರಿದಂತೆ ಹಲವು ಗ್ರಾಮಗಳ ರೈತರು ತಮ್ಮ ಜಮೀನುಗಳಿಗೆ ತೆರಳಲು, ಬೆಳೆದ ದವಸ ಧಾನ್ಯಗಳು ಹಾಗೂ ಜಾನುವಾರುಗಳ ಮೇವು ಸಾಗಿಸಲು ತೀವ್ರ ಅಡಚಣೆಯಾಗಲಿದೆ. ಅಲ್ಲದೆ ವೃದ್ಧರು ಮತ್ತು ಮಹಿಳೆಯರಿಗೆ ದಿನನಿತ್ಯದ ಸಂಚಾರಕ್ಕೆ ಭಾರೀ ತೊಂದರೆಯಾಗಲಿದ್ದು, ಅಧಿಕಾರಿಗಳು ಈ ಸಮಸ್ಯೆಯನ್ನು ತಕ್ಷಣವೇ ಗಮನಿಸಬೇಕು ಎಂದು ಆಗ್ರಹಿಸಿದರು.

​ಉಗ್ರ ಹೋರಾಟದ ಎಚ್ಚರಿಕೆ:

ಗೇಟ್ ಸಂಖ್ಯೆ 58 ಅನ್ನು ಮುಚ್ಚದೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿಡಲು ಒತ್ತಾಯಿಸಿ ಸಂಸದರು, ಜಿಲ್ಲಾಡಳಿತ ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ಮನವಿಗೆ ಸ್ಪಂದಿಸದಿದ್ದರೆ ಗ್ರಾಮಸ್ಥರೊಂದಿಗೆ ಸೇರಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಕೆ.ಎಸ್. ಈಶ್ವರಗೌಡ ಎಚ್ಚರಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!