ಚಾಮರಾಜನಗರ: ಹುಲಿ ಹಲ್ಲು ಹಾಗೂ ಉಗುರು ಮಾರಾಟಕ್ಕೆ ಯತ್ನ – ಮೂವರು ವನ್ಯಜೀವಿ ತಸ್ಕರರ ಬಂಧನ!

ಚಾಮರಾಜನಗರ: ಜಿಲ್ಲೆಯ ಹರದನಹಳ್ಳಿ ಸಮೀಪ ರಕ್ಷಿತ ಅರಣ್ಯ ಪ್ರದೇಶದ ಜೀವ ವೈವಿಧ್ಯಕ್ಕೆ ಕಂಟಕವಾಗಿದ್ದ ಹುಲಿಯ ದೇಹದ ಅಂಗಾಂಗಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ವಿಶೇಷ ಹುಲಿ ಸಂರಕ್ಷಣಾದಳ (STPF) ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಬಂಧಿತರನ್ನು ಹೊಸಪೋಡು ಗ್ರಾಮದ ಮಹದೇವ, ಮಾವತ್ತೂರಿನ ರಮೇಶ್ ಹಾಗೂ ಒಡೆಯರಪಾಳ್ಯದ ಮಣಿ ಎಂದು ಗುರುತಿಸಲಾಗಿದೆ.
ಅಂಗಾಂಗಗಳು ಹಾಗೂ ವಾಹನ ವಶ:
ರಹಸ್ಯ ಮಾಹಿತಿಯನ್ನಾಧರಿಸಿ ಹರದನಹಳ್ಳಿ ಬಳಿ ದಾಳಿ ನಡೆಸಿದ ಅಧಿಕಾರಿಗಳ ತಂಡ, ಆರೋಪಿಗಳಿಂದ ಹುಲಿಯ 4 ಕೋರೆಹಲ್ಲುಗಳು, 2 ದವಡೆ ಹಲ್ಲುಗಳು ಹಾಗೂ ಒಂದು ಉಗುರನ್ನು ಜಪ್ತಿ ಮಾಡಿಕೊಂಡಿದ್ದಾರೆ. ಇದರೊಂದಿಗೆ ಕೃತ್ಯಕ್ಕೆ ಹಾಗೂ ಸಾಗಾಟಕ್ಕೆ ಬಳಸಲಾಗಿದ್ದ ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.
ವಿಶೇಷ ಹುಲಿ ಸಂರಕ್ಷಣಾದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಗೆ ಈ ಹುಲಿ ಹಲ್ಲು ಮತ್ತು ಉಗುರುಗಳು ಎಲ್ಲಿಂದ ಲಭ್ಯವಾದವು ಹಾಗೂ ಇದರ ಹಿಂದೆ ದೊಡ್ಡ ಜಾಲವಿದೆಯೇ ಎಂಬ ಕೋನದಲ್ಲಿ ತನಿಖೆ ಮುಂದುವರಿಸಿದ್ದಾರೆ.



