ನಕಲಿ ಸರ್ಕಾರಿ ನೇಮಕಾತಿ ಜಾಲ ಪತ್ತೆ: ಗೃಹ ಸಚಿವರ ಆಪ್ತನ ತೋಟದ ಶೆಡ್ನಲ್ಲೇ ದಂಧೆ!

ತುಮಕೂರು: ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ನೂರಾರು ಅಭ್ಯರ್ಥಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ವಿಶೇಷವೆಂದರೆ, ಈ ದಂಧೆಯು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಪರಮಾಪ್ತ ಎನ್ನಲಾದ ವಾಲೆ ಚಂದ್ರು ಎಂಬುವವರಿಗೆ ಸೇರಿದ ತೋಟದ ಶೆಡ್ನಲ್ಲಿ ನಡೆಯುತ್ತಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ತುಮಕೂರು ತಾಲೂಕಿನ ವಡ್ಡರಹಳ್ಳಿಯಲ್ಲಿರುವ ವಾಲೆ ಚಂದ್ರು ಅವರ ತೋಟದ ಶೆಡ್ನಲ್ಲಿ ಸುಮಾರು 15ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳನ್ನು ಇರಿಸಿಕೊಂಡು, ಅವರಿಗೆ ಅರಣ್ಯ ಇಲಾಖೆಯ ಕೆಲಸ ಸಿಕ್ಕಿದೆ ಎಂದು ನಂಬಿಸಿ ತರಬೇತಿ ನೀಡಲಾಗುತ್ತಿತ್ತು. ಪರಿಸರ ಮತ್ತು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ನೇಗಿ ಅವರ ನಕಲಿ ಸಹಿ ಇರುವ ನೇಮಕಾತಿ ಆದೇಶ ಪತ್ರಗಳನ್ನು ಅಭ್ಯರ್ಥಿಗಳಿಗೆ ನೀಡಿ ನೈಜತೆಯ ಭ್ರಮೆ ಮೂಡಿಸಲಾಗಿತ್ತು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಉದ್ಯೋಗಾಕಾಂಕ್ಷಿಗಳಿಂದ ತಲಾ 3 ರಿಂದ 5 ಲಕ್ಷ ರೂಪಾಯಿಗಳನ್ನು ಈಗಾಗಲೇ ವಸೂಲಿ ಮಾಡಲಾಗಿದೆ. ತರಬೇತಿ ಮುಗಿದ ನಂತರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಅಭ್ಯರ್ಥಿಗಳಿಂದ ತಲಾ ಇನ್ನೂ 5 ಲಕ್ಷ ರೂಪಾಯಿ ಪೀಕುವ ಉದ್ದೇಶ ವಂಚಕರ ತಂಡಕ್ಕಿತ್ತು ಎಂದು ತಿಳಿದುಬಂದಿದೆ. ಒಟ್ಟು ನೂರಕ್ಕೂ ಹೆಚ್ಚು ಮಂದಿ ಈ ಜಾಲಕ್ಕೆ ಸಿಲುಕಿ ಮೋಸ ಹೋಗಿರುವ ಸಾಧ್ಯತೆ ಇದೆ.
ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ತರಬೇತಿ ನಡೆಯುತ್ತಿದ್ದ ಸ್ಥಳದ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ್ದಾರೆ. ಈ ವೇಳೆ 15 ಮಂದಿ ಉದ್ಯೋಗಾಕಾಂಕ್ಷಿಗಳನ್ನು ರಕ್ಷಿಸಲಾಗಿದ್ದು, ಅಧಿಕಾರಿಗಳನ್ನು ಕಂಡ ಕೂಡಲೇ ವಂಚಕರ ತಂಡ ಪರಾರಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಆರ್ಎಫ್ಒ ನಮಿತಾ ಅವರು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ವಂಚನೆಯ ಮುಂಚೂಣಿಯಲ್ಲಿದ್ದ ಎನ್ನಲಾದ ವಾಲೆ ಚಂದ್ರು ಅವರ ಹೆಸರನ್ನು ಎಫ್ಐಆರ್ನಿಂದ ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಅನುಮಾನಗಳಿಗೆ ಕಾರಣವಾಗಿದೆ.
ಸದ್ಯ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.



