ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ಅಫ್ರಿನ್ ಖಾನ್ ಉಚ್ಚಾಟನೆ

ಬೆಂಗಳೂರು: ಪಕ್ಷದ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಗೂ ವಿಡಿಯೋ ಹರಿಬಿಟ್ಟಿದ್ದ ಬೆಂಗಳೂರು ಉತ್ತರ ಜಿಲ್ಲಾ ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ಅಫ್ರಿನ್ ಖಾನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾ ರಾಜಕೀಯದ ವಿಚಾರವಾಗಿ ಕಾಂಗ್ರೆಸ್ ಪಕ್ಷದೊಳಗೆ ಸಂಘರ್ಷ ತಾರಕಕ್ಕೇರಿದೆ. ಈ ನಡುವೆ ಸಚಿವ ಜಮೀರ್ ಅಹಮದ್ ಖಾನ್ ಅವರ ಬೆಂಬಲಿಗರಾದ ಅಫ್ರಿನ್ ಖಾನ್, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರನ್ನು ಗುರಿಯಾಗಿಸಿಕೊಂಡು ‘ಮೀರ್ ಸಾದಿಕ್’ ಎಂದು ಸಂಬೋಧಿಸಿ ಅವಹೇಳನಕಾರಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಈ ನಡೆ ಪಕ್ಷದ ಶಿಸ್ತಿನ ಉಲ್ಲಂಘನೆ ಎಂದು ಕೆಪಿಸಿಸಿ ಗಂಭೀರವಾಗಿ ಪರಿಗಣಿಸಿದೆ.
ಪಕ್ಷದ ಮುಖಂಡರ ವಿರುದ್ಧ ಸಾರ್ವಜನಿಕವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಅಫ್ರಿನ್ ಖಾನ್ ಅವರನ್ನು ಯೂತ್ ಕಾಂಗ್ರೆಸ್ ಘಟಕದ ಸ್ಥಾನದಿಂದ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಉಚ್ಚಾಟಿಸಿ ಆದೇಶ ಹೊರಡಿಸಲಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಗೊಂದಲಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಈಗಾಗಲೆ ಕಠಿಣ ನಿಲುವು ತಳೆದಿದ್ದಾರೆ. ಸಣ್ಣಪುಟ್ಟ ಕಾರ್ಯಕರ್ತರೇ ಆಗಲಿ ಅಥವಾ ಪದಾಧಿಕಾರಿಗಳೇ ಆಗಲಿ, ಪಕ್ಷದ ಶಿಸ್ತಿಗೆ ಧಕ್ಕೆ ತಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂಬ ಸಂದೇಶವನ್ನು ಈ ಉಚ್ಚಾಟನೆಯ ಮೂಲಕ ಕೆಪಿಸಿಸಿ ರವಾನಿಸಿದೆ.
ಈ ಬೆಳವಣಿಗೆಯು ಜಮೀರ್ ಅಹಮದ್ ಖಾನ್ ಹಾಗೂ ರಿಜ್ವಾನ್ ಅರ್ಷದ್ ಬೆಂಬಲಿಗರ ನಡುವಿನ ಶೀತಲ ಸಮರಕ್ಕೆ ಸಾಕ್ಷಿಯಾಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.



