Crime Newsಕ್ರೈಂ ಸುದ್ದಿರಾಜ್ಯ ಸುದ್ದಿ

ಆಸ್ತಿಗಾಗಿ ಅಣ್ಣನನ್ನೇ ಬಲಿಪಡೆದ ತಮ್ಮ: ಅಪಘಾತದ ನಾಟಕವಾಡಿದ ಕಿರಾತಕರು ಈಗ ಪೊಲೀಸ್ ವಶಕ್ಕೆ!

Share News

ಹರಪನಹಳ್ಳಿ: ಹಿರಿಯ ಅಣ್ಣ ಮನೆಯ ಜವಾಬ್ದಾರಿ ಹೊತ್ತು ಜಮೀನು ಸಂಭಾಳಿಸುತ್ತಿದ್ದರೆ, ಆಸ್ತಿ ಪಾಲಿಗಾಗಿ ಹಠ ಹಿಡಿದಿದ್ದ ಸ್ವಂತ ತಮ್ಮನೇ ಅಣ್ಣನನ್ನು ಬರ್ಬರವಾಗಿ ಹತ್ಯೆ ಮಾಡಿ, ಅದನ್ನೊಂದು ಅಪಘಾತವೆಂದು ಬಿಂಬಿಸಲು ಹೋಗಿ ಪೊಲೀಸರ ಅತಿಥಿಯಾದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಹಗರಿ ಶಿರನಹಳ್ಳಿ ಗ್ರಾಮದ ಮರಳು ಸಿದ್ದೇಶ (26) ಎಂದು ಗುರುತಿಸಲಾಗಿದೆ. ಈತನ ಕೊಲೆಗೆ ಸಂಚು ರೂಪಿಸಿದ ಸ್ವಂತ ತಮ್ಮ ಪತ್ರಿಗೌಡ (24) ಹಾಗೂ ಆತನ ಸ್ನೇಹಿತ ಉತ್ತಂಗಿ ನಾರಪ್ಪ (29) ಎಂಬುವವರನ್ನು ಅರಸೀಕೆರೆ ಪೊಲೀಸರು ಬಂಧಿಸಿದ್ದಾರೆ.

​ಮೃತನ ತಾಯಿ ಶಾಂತಮ್ಮ ಅವರು ನೀಡಿದ ದೂರಿನ ಪ್ರಕಾರ, ಹಿರಿಯ ಮಗ ಮರಳು ಸಿದ್ದೇಶ ಮನೆಯ ಕೃಷಿ ಮತ್ತು ಟ್ರಾಕ್ಟರ್ ಕೆಲಸಗಳನ್ನು ಜವಾಬ್ದಾರಿಯಿಂದ ನೋಡಿಕೊಳ್ಳುತ್ತಿದ್ದ. ಆದರೆ, ಎರಡನೇ ಮಗ ಪತ್ರಿಗೌಡ ತನಗೆ ಆಸ್ತಿಯಲ್ಲಿ ಪಾಲು ಬೇಕೆಂದು ಸದಾ ತಾಯಿ ಮತ್ತು ಅಣ್ಣನೊಂದಿಗೆ ಜಗಳವಾಡುತ್ತಿದ್ದ. ಮಾರ್ಚ್ 13ರಂದು ಇದೇ ವಿಚಾರವಾಗಿ ತೀವ್ರ ವಾಗ್ವಾದ ನಡೆಸಿ, “ಪಾಲು ಕೊಡದಿದ್ದರೆ ಬೆಂಗಳೂರಿಗೆ ಹೋಗುತ್ತೇನೆ” ಎಂದು ಮನೆಯಿಂದ ಹೊರನಡೆದಿದ್ದ.

ಮನೆಯಿಂದ ಹೊರಹೋದ ತಮ್ಮನನ್ನು ಹುಡುಕಲು ಮರಳು ಸಿದ್ದೇಶನು ಉತ್ತಂಗಿ ನಾರಪ್ಪ ಎಂಬುವವನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ತೆರಳಿದ್ದ. ತಡರಾತ್ರಿ 1 ಗಂಟೆಯ ಸುಮಾರಿಗೆ ಹಿರೇಮೇಗಳಗೆರೆ ಸಮೀಪದ ಹೊಸಹಳ್ಳಿ ಕ್ರಾಸ್ ಬಳಿ ಬೈಕ್ ಅಪಘಾತಕ್ಕೀಡಾಗಿ ಸಿದ್ದೇಶ ಮೃತಪಟ್ಟಿದ್ದಾನೆ ಎಂಬ ಮಾಹಿತಿ ತಾಯಿಗೆ ತಲುಪಿದೆ.

ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಮಗನ ಶವವನ್ನು ನೋಡಿದ ತಾಯಿ ಶಾಂತಮ್ಮ ಅವರಿಗೆ ಅನುಮಾನ ಮೂಡಿತು. ಮಗನ ತಲೆ ಮತ್ತು ಎದೆಯ ಮೇಲಿದ್ದ ಗಾಯಗಳು ವಾಹನ ಅಪಘಾತದಿಂದ ಉಂಟಾದಂತೆ ಇರಲಿಲ್ಲ. ಬದಲಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಗುರುತುಗಳಂತೆ ಕಂಡುಬಂದವು. ಅಲ್ಲದೆ, ಬೈಕ್‌ನಲ್ಲಿದ್ದ ಉಳಿದ ಇಬ್ಬರಿಗೆ ಸಣ್ಣ ಗಾಯವೂ ಆಗದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು.

​ತಾಯಿ ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು, ತನಿಖೆ ಕೈಗೊಂಡ ಕೇವಲ 24 ಗಂಟೆಗಳಲ್ಲಿ ಸತ್ಯವನ್ನು ಬಯಲಿಗೆಳೆದಿದ್ದಾರೆ. ಆಸ್ತಿ ಹಂಚಿಕೆ ವಿಚಾರದ ದ್ವೇಷವೇ ಈ ಕೊಲೆಗೆ ಪ್ರಮುಖ ಕಾರಣ ಎಂಬುದು ದೃಢಪಟ್ಟಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇವಲ ಒಂದು ದಿನದಲ್ಲಿ ಪ್ರಕರಣವನ್ನು ಭೇದಿಸಿದ ಡಿವೈಎಸ್‌ಪಿ ಸಂತೋಷ್ ಚೌಹಾಣ್, ಸಿಪಿಐ ಮಹಾಂತೇಶ್ ಸಜ್ಜನ್ ಹಾಗೂ ಪಿಎಸ್‌ಐಗಳಾದ ವಿಜಯ ಕೃಷ್ಣ ಮತ್ತು ನಾಗರತ್ನ ಅವರ ತಂಡದ ದಕ್ಷತೆಯನ್ನು ಶ್ಲಾಘಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!