ಕೆಎಸ್‌ಆರ್‌ಟಿಸಿ ಬತ್ತಳಿಕೆಗೆ 115 ಹೊಸ ಬಸ್‌ಗಳ ಸೇರ್ಪಡೆ: ಸಚಿವ ರಾಮಲಿಂಗಾ ರೆಡ್ಡಿ ಚಾಲನೆ

ಬೆಂಗಳೂರು: ರಾಜ್ಯದ ಸಾರ್ವಜನಿಕ ಸಾರಿಗೆ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿತವಾಗಿದೆ. ಪ್ರಯಾಣಿಕರ ಸುಗಮ ಹಾಗೂ ಆರಾಮದಾಯಕ ಪ್ರಯಾಣಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನೂತನವಾಗಿ 115 ಬಸ್‌ಗಳನ್ನು ರಸ್ತೆಗಿಳಿಸಿದೆ. ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹಸಿರು ನಿಶಾನೆ ತೋರುವ ಮೂಲಕ ಈ ನೂತನ ಬಸ್‌ಗಳ ಸೇವೆಗೆ ಅಧಿಕೃತ ಚಾಲನೆ ನೀಡಿದರು.
ಒಟ್ಟು 115 ಬಸ್‌ಗಳಲ್ಲಿ 45 ಕರ್ನಾಟಕ ಸಾರಿಗೆ (ವೇಗದೂತ) ಬಸ್‌ಗಳು ಹಾಗೂ ಅತ್ಯಾಧುನಿಕ ಸೌಲಭ್ಯವುಳ್ಳ 70 ಪಲ್ಲಕ್ಕಿ ಎಸಿ ಸ್ಲೀಪರ್ ಬಸ್‌ಗಳು ಸೇರಿವೆ. ಈ ಪಲ್ಲಕ್ಕಿ ಬಸ್‌ಗಳು ದೂರದ ಪ್ರಯಾಣದ ಪ್ರಯಾಣಿಕರಿಗೆ ಐಷಾರಾಮಿ ಅನುಭವ ನೀಡಲಿವೆ.
ಇದೇ ವೇದಿಕೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಾರಿಗೆ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿರುವ ಮಹಿಳಾ ಸಿಬ್ಬಂದಿಯನ್ನು ಈ ಸಂದರ್ಭದಲ್ಲಿ ಗುರುತಿಸಲಾಯಿತು.
ಸಾರಿಗೆ ಸಂಸ್ಥೆಯ 1.04 ಲಕ್ಷ ಸಿಬ್ಬಂದಿಗಳಲ್ಲಿ 8,956 ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ.ಉತ್ತಮ ಸೇವೆ ಸಲ್ಲಿಸಿದ 19 ತಾಂತ್ರಿಕ ಸಿಬ್ಬಂದಿ, 15 ನಿರ್ವಾಹಕರು ಹಾಗೂ 12 ಪೇದೆಗಳು ಸೇರಿದಂತೆ ಒಟ್ಟು 46 ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹೊಸದಾಗಿ ಸೇರ್ಪಡೆಗೊಂಡ ಪಲ್ಲಕ್ಕಿ ಬಸ್‌ಗಳು ರಾಜ್ಯದ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಸಂಪರ್ಕಿಸಲಿವೆ: ರಾಜ್ಯದ ಒಳಗಿನ ಪ್ರಮುಖ ಕೇಂದ್ರಗಳು: ಮಂಗಳೂರು, ಉಡುಪಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಆಗುಂಬೆ, ಹಂಪಿ, ದಾವಣಗೆರೆ ಮತ್ತು ಮೈಸೂರು.
ಅಂತರರಾಜ್ಯ ಸೇವೆ: ಹೈದರಾಬಾದ್, ಚೆನ್ನೈ, ಪಣಜಿ, ಮಧುರೈ, ಪಾಂಡಿಚೇರಿ, ಎರ್ನಾಕುಲಂ ಮತ್ತು ಮುನ್ನಾರ್ ಸೇರಿದಂತೆ ನೆರೆರಾಜ್ಯದ ಪ್ರಮುಖ ನಗರಗಳಿಗೆ ಈ ಸೇವೆ ವಿಸ್ತರಣೆಯಾಗಲಿದೆ.
ಸಾರಿಗೆ ಇಲಾಖೆಯು ಮುಂಬರುವ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳಲಿದ್ದು, ಏಪ್ರಿಲ್‌ನಿಂದ ಜೂನ್ 2026ರ ಅವಧಿಯಲ್ಲಿ ಒಟ್ಟು 805 ಹೊಸ ಬಸ್‌ಗಳನ್ನು (ಕರ್ನಾಟಕ ಸಾರಿಗೆ ಮತ್ತು ನಗರ-ಗ್ರಾಮಾಂತರ) ಸೇರ್ಪಡೆಗೊಳಿಸಲು ಯೋಜನೆ ರೂಪಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನೂತನ ಬಸ್‌ಗಳ ಸೇರ್ಪಡೆಯಿಂದಾಗಿ ರಜಾ ದಿನಗಳಲ್ಲಿ ಮತ್ತು ಹಬ್ಬಗಳ ಸಮಯದಲ್ಲಿ ಪ್ರಯಾಣಿಕರಿಗೆ ಎದುರಾಗುತ್ತಿದ್ದ ಸಾರಿಗೆ ಕೊರತೆ ನೀಗಲಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.



