Crime Newsಕ್ರೈಂ ಸುದ್ದಿಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಮಲಗಿದ್ದ ವೃದ್ಧೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುರುಳರು: ಕೆಜಿಎನ್ ಬಡಾವಣೆಯಲ್ಲಿ ಭೀಕರ ಕೃತ್ಯ!

Share News

ಚಿಂತಾಮಣಿ: ನಗರದ ಕೆಜಿಎನ್ ಬಡಾವಣೆಯಲ್ಲಿ ಶುಕ್ರವಾರ ತಡರಾತ್ರಿ ಮಲಗಿದ್ದ ವೃದ್ಧೆಯೊಬ್ಬರ ಮೇಲೆ ಅಪರಿಚಿತರು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಈ ಭೀಕರ ಕೃತ್ಯದಿಂದ ಇಡೀ ಬಡಾವಣೆ ಆತಂಕದಲ್ಲಿ ಮುಳುಗಿದೆ.

ಕೆಜಿಎನ್ ಬಡಾವಣೆಯ ನಿವಾಸಿ ಲಕ್ಷ್ಮಿದೇವಮ್ಮ (65) ಎಂಬುವವರು ಶುಕ್ರವಾರ ರಾತ್ರಿ ತಮ್ಮ ಮನೆಯ ಆವರಣದಲ್ಲಿ ಸೊಳ್ಳೆ ಪರದೆ ಕಟ್ಟಿಕೊಂಡು ಮಲಗಿದ್ದರು. ಮಧ್ಯರಾತ್ರಿಯ ಸುಮಾರಿಗೆ ಅಪರಿಚಿತ ದುರುಳರು ಇವರ ಮೇಲೆ ಪೆಟ್ರೋಲ್ ಅಥವಾ ದಹನಕಾರಿ ಪದಾರ್ಥ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ಮಧ್ಯರಾತ್ರಿ ಸುಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ಎಚ್ಚೆತ್ತು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಮನೆಯವರು ಹೊರಗೆ ಬಂದು ನೋಡಿದಾಗ ಲಕ್ಷ್ಮಿದೇವಮ್ಮ ಅವರಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು ಕಂಡುಬಂದಿದೆ. ಕೂಡಲೇ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ಗಾಯಾಳುವಿನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಲಕ್ಷ್ಮಿದೇವಮ್ಮ ಅವರಿಗೆ ಸುಮಾರು ಶೇ. 30 ರಿಂದ 40 ರಷ್ಟು ಸುಟ್ಟ ಗಾಯಗಳಾಗಿವೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕುಶಾಲ್ ಚೌಕ್ಸೆ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. “ಸದ್ಯ ಮನೆಯವರು ಗಾಯಾಳುವಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿದ್ದಾರೆ. ಅವರು ಮರಳಿದ ನಂತರ ಅಧಿಕೃತ ಹೇಳಿಕೆ ಪಡೆದು ತನಿಖೆ ನಡೆಸಲಾಗುವುದು,” ಎಂದು ಅವರು ತಿಳಿಸಿದ್ದಾರೆ. ಹಳೆ ದ್ವೇಷ ಅಥವಾ ಇತರ ಕಾರಣಗಳ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!